ಪಾಕಿಸ್ತಾನ ದೋಣಿಯಿಂದ 400 ಕೋಟಿ ಮೌಲ್ಯದ ಹೆರಾಯಿನ್ ವಶ

ಪಟ್ನಾ ಡಿ 20 : ಪಾಕಿಸ್ತಾನದಿಂದ ಮೀನುಗಾರಿಕೆ ಬಂದರಿನಲ್ಲಿ ಬಂದಿದ್ದ ಬೃಹತ್‌ ಪ್ರಮಾಣದ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳುವಲ್ಲಿ ಭಾರತೀಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು ₹ 400 ಕೋಟಿ ಮೌಲ್ಯದ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದನ್ನು ಗುಜರಾತ್‌ ಬಂದರಿನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಉಗ್ರ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ದೋಣಿಯನ್ನು ದಸ್ತಗಿರಿ ಮಾಡಲಾಗಿದೆ.

“ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಉಗ್ರ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೀನುಗಾರಿಕಾ ಬೋಟ್‌ ‘ಅಲ್‌ ಹುಸೈನಿ’ ಯನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಆರು ಮಂದಿ ಸಿಬ್ಬಂದಿಗಳಿದ್ದರು. ಅವರಿಂದ ₹ 400 ಕೋಟಿ ಮೌಲ್ಯದ 77 ಕೆಜಿ ಹೆರಾಯಿನ್‌ ವಶಕ್ಕೆ ಪಡೆಯಲಾಗಿದೆ” ಎಂದು ಭಾರತೀಯ ರಕ್ಷಣಾ ಇಲಾಖೆಯ ಗುಜರಾತ್‌ ಪಿಆರ್‌ಓ ಟ್ವೀಟ್‌ ಮಾಡಿದೆ.

ಈ ದೋಣಿಯು ಭಾರತಕ್ಕೆ ಸೇರಿದ ಜಲ ಪ್ರದೇಶದಲ್ಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸಿಬ್ಬಂದಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

Exit mobile version