ರೊನಾಲ್ಡೊ ಬಳಿಕ ಪೌಲ್ ಪೊಗ್ಬಾ- ಮ್ಯಾನುಯೆಲ್ ಲೊಕಾಟೆಲ್ಲಿ ಸರದಿ: ಕೊಕಾ ಕೋಲಾ, ಬಿಯರ್ ಬಾಟಲ್ ಪಕ್ಕಕ್ಕೆ ಸರಿಸಿದ ಸ್ಟಾರ್ ಪ್ಲೇಯರ್ಸ್

ಬೆಂಗಳೂರು,ಜೂ.17: ವಿಶ್ವದ ಸ್ಟಾರ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯುರೋಪಿಯನ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಕೊಕಾ-ಕೋಲಾ ಬಾಟಲ್‌ಗಳನ್ನು ಪಕ್ಕಕ್ಕೆ ಸರಿಸುವ ಮೂಲಕ ನೀರು ಕುಡಿಯಿರಿ ಎಂದಿದ್ದರು. ಇದೀಗ ವಿಶ್ವದ ಮತ್ತಿಬ್ಬರು ಸ್ಟಾರ್​ ಆಟಗಾರರು ಸಹ ಕ್ರಿಸ್ಟಿಯಾನೊ ರೊನಾಲ್ಡೊ ಹಾದಿಯಲ್ಲಿ ಸಾಗಿದ್ದಾರೆ.

ಫ್ರಾನ್ಸ್ ತಂಡದ ಫುಟ್ಬಾಲ್ ಆಟಗಾರ ಪೌಲ್ ಪೊಗ್ಬಾ ಹಾಗೂ ಇಟಲಿಯ ಮ್ಯಾನುಯೆಲ್ ಲೊಕಾಟೆಲ್ಲಿ ಸಹ ಪತ್ರಿಕಾಗೋಷ್ಠಿ ವೇಳೆಯಲ್ಲಿ ತಮ್ಮ ಎದುರಿಗೆ ಇಡಲಾಗಿದ್ದ ಕೊಕಾ ಕೋಲಾ ಹಾಗೂ ಬಿಯರ್ ಬಾಟಲ್ ಪಕ್ಕಕ್ಕೆ ಸರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಟಲಿ ಹಾಗೂ ಪೋರ್ಚುಗಲ್ ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಗೆ ಆಗಮಿಸಿದ ಲೊಕಾಟೆಲ್ಲಿ, ಕೊಕಾ ಕೋಲಾ ಬಾಟಲ್​ ಪಕ್ಕಕ್ಕಿಟ್ಟು, ಕೋಲಾ ಬದಲು ನೀರು ಕುಡಿಯಿರಿ ಎಂಬ ಸಂದೇಶ ನೀಡಿದರು.

ಮತ್ತೊಂದೆಡೆ ಫ್ರಾನ್ಸ್​ ತಂಡದ ಮಿಡ್ ಫೀಲ್ಡ್​ ಆಟಗಾರ ಪೌಲ್ ಪೊಗ್ಬಾ, ಯುರೋ 2020 ಚಾಂಪಿಯನ್ಷಿಪ್ ಫುಟ್ಬಾಲ್ ಪಂದ್ಯಾವಳಿಯ ಪ್ರೆಸ್​ಮೀಟ್ ವೇಳೆ ತಮ್ಮ ಎದುರಿಗೆ ಇಡಲಾಗಿದ್ದ ಬಿಯರ್ ಬಾಟಲ್​ ಅನ್ನು ಟೇಬಲ್ ಕಳೆಗಿಡುವ ಮೂಲಕ ಗಮನ ಸೆಳೆದಿದ್ದರು. ಕ್ರಿಸ್ಟಿಯಾನೊ ರೊನಾಲ್ಡೊ ಬಳಿಕ ಈ ಇಬ್ಬರು ಸ್ಟಾರ್ ಆಟಗಾರರು ಕೊಕಾ ಕೋಲಾ ಹಾಗೂ ಬಿಯರ್ ಬಾಟಲ್ ಅನ್ನು ಪಕ್ಕಕ್ಕೆ ಸರಿಸಿರುವ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೊನಾಲ್ಡೊ ಕೊಕಾ ಕೋಲಾ ಬಾಟಲ್‌ಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ಬೆನ್ನಲ್ಲೆ, ಪಾನೀಯ ಸಂಸ್ಥೆಯ 56.10 ಡಾಲರ್‌ನಷ್ಟು ಇದ್ದ ಶೇರ್ ಮೌಲ್ಯ ತಕ್ಷಣ 55.22 ಡಾಲರ್‌ಗೆ ಇಳಿಯಿತು. ಅಂದರೆ, ಇದರಲ್ಲಿ ಶೇ. 1.6 ಡಾಲರ್‌ ಮೌಲ್ಯ ಕುಸಿತ ಕಂಡಿತು. ಅಲ್ಲದೆ, ಕೊಕಾ-ಕೋಲಾ ಕಂಪನಿಯ ಮಾರುಕಟ್ಟೆ ಮೌಲ್ಯ 242 ಡಾಲರ್‌ ಬಿಲಿಯನ್‌ನಿಂದ 238 ಡಾಲರ್‌ ಬಿಲಿಯನ್‌ ಮೌಲ್ಯಕ್ಕೆ ಕುಸಿಯಿತು. ಇದರಲ್ಲಿ 4 ಡಾಲರ್‌ ಬಿಲಿಯನ್ ಶೇರ್‌ ಮೌಲ್ಯ ಕುಸಿದಂತಾಯಿತು.

Exit mobile version