ಎಕೆ -203 ಬಂದೂಕುಗಳನ್ನು ಉತ್ಪಾದಿಸಲು ಭಾರತಕ್ಕೆ ಅನುಮತಿ

ಹೊಸದೆಹಲಿ ಆ17 : ಭಾರತಕ್ಕೆ ಬಹುನಿರೀಕ್ಷಿತ  ಎಕೆ -203 ರೈಫಲ್‌ಗಳನ್ನು ದೇಶೀಯವಾಗಿ ಉತ್ಪಾದನೆ ಮಾಡಲು ರಷ್ಯಾ ಅನುಮತಿ ನೀಡಿದೆ

ಈ ರೈಫಲ್‌ಗಳು ಎಕೆ-47 ರೈಫಲ್‌ಗಳಷ್ಟೇ ಪರಿಣಾಮಕಾರಿ ರೈಫಲ್‌ಗಳಾಗಿವೆ. ಈ ರೈಫಲ್‌ಗಳನ್ನು ರಷ್ಯಾದ ಮಿಖಾಯಿಲ್ ಕಲಾಶ್ನಿಕೋವ್ ಎಂಬಾತ ವಿನ್ಯಾಸ‌ಗೊಳಿಸಿದ್ದಾನೆ. ಈ ರೈಫಲ್ ಅತ್ಯಂತ ತೀಕ್ಷ್ಣ ಮತ್ತು ಚುರುಕಾದ ದಾಳಿಗೆ ಹೆಸರುವಾಸಿಯಾಗಿದ್ದು, ಜಗತ್ತಿನೆಲ್ಲೆಡೆ ಈ ರೈಫಲ್‌ಗಳಿಗೆ ಭಾರೀ ಬೇಡಿಕೆ ಇದೆ.

ಎಕೆ-203 ರೈಫಲ್‌ಗಳನ್ನು ದೇಶೀಯವಾಗಿ ತಯಾರಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷಗಳಿಂದ ಭಾರತ ಮತ್ತು ರಷ್ಯಾ ನಡುವೆ ಮಾತುಕತೆ ನಡೆಯುತ್ತಿತ್ತು. ಈ ರೈಫಲ್‌ಗಳ ತಯಾರಿಕೆಗೆ ಸಂಬಂಧಿಸಿದಂತೆ 5,125 ಕೋಟಿ ರೂ.ಗಳ ಒಪ್ಪಂದ‌ಕ್ಕೆ ರಷ್ಯಾ ಇದೀಗ ಒಪ್ಪಿಗೆ ಸೂಚಿಸಿದೆ. ಉತ್ತರ ಪ್ರದೇಶದ‌ಲ್ಲಿ ಈ ರೈಫಲ್‌ಗಳ ಉತ್ಪಾದನೆ ನಡೆಯಲಿದ್ದು, ಇಂಡೋ ರಷ್ಯನ್ ಪ್ರೈವೇಟ್ ಲಿ. ಈ ರೈಫಲ್‌ಗಳನ್ನು ತಯಾರಿಸಲಿದೆ. ಕೆಲವೇ ವರ್ಷಗಳಲ್ಲಿ ಆರು ಲಕ್ಷ ರೈಫಲ್‌ಗಳನ್ನು ಉತ್ಪಾದಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.

ದೇಶದ ಭದ್ರತಾ ಪಡೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ದೇಶೀಯ‌ವಾಗಿ ಎಕೆ – 203 ಬಂದೂಕುಗಳ ತಯಾರಿಕೆಗೂ ರಷ್ಯಾ ಅನುಮತಿ ನೀಡಿರುವುದು ದೇಶದ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ‌ಯಾಗಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ದೇಶಕ್ಕೆ ಮತ್ತಷ್ಟು ಬಲವನ್ನು ತುಂಬಲು ಸಹಕಾರಿಯಾಗಿದೆ.

Exit mobile version