Petrol Rate Today ; ಶತಕಕ್ಕೆ ದಾಪುಗಾಲಿಟ್ಟ ಪೆಟ್ರೊಲ್ ದರ

ನವದೆಹಲಿ, ಜೂ. 08: ಕೊರೋನಾ ಸಂಕಷ್ಟದ ನಡುವೆ ಬೆಲೆಯೇರಿಕೆಯ ಬಿಸಿ ತಟ್ಟುತ್ತಿದ್ದು, ಕರ್ನಾಟಕ ಸೇರಿ ಭಾರತದ 7 ರಾಜ್ಯಗಳಲ್ಲಿ  1 ಲೀಟರ್ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಕರ್ನಾಟಕದ ಉತ್ತರ ಕನ್ನಡದ ಶಿರಸಿ, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಶಿರಸಿ ಸೇರಿದಂತೆ ಮಲೆನಾಡು ಭಾಗದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100.24 ರೂ. ಆಗಿದೆ. ಕರಾವಳಿ ಭಾಗದಲ್ಲೂ ಪೆಟ್ರೋಲ್ ದರ 100 ರೂ. ಸಮೀಪಿಸುತ್ತಿದೆ. ಕಾರವಾರದಲ್ಲಿ 99.86 ರೂ. ಇದೆ. ಡೀಸೆಲ್ ಬೆಲೆಯೂ ಏರಿಕೆಯಾಗುತ್ತಿದ್ದು, ಶಿರಸಿಯಲ್ಲಿ 92.88 ರೂ.ಗೆ ಏರಿಕೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 100.06 ರೂ. ಆಗಿದೆ. ಬಳ್ಳಾರಿಯಲ್ಲಿ 1 ಲೀಟರ್ ಪೆಟ್ರೋಲ್​ಗೆ 100.10 ರೂ. ಆಗಿದೆ. ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ 99 ರೂ. ಗಡಿಯಲ್ಲಿದ್ದು, ಮುಂದಿನ ವಾರದೊಳಗೆ ಶತಕ ಬಾರಿಸುವ ಸಾಧ್ಯತೆಯಿದೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲೂ ಪೆಟ್ರೋಲ್ ಬೆಲೆ 100 ರೂ.ನತ್ತ ದಾಪುಗಾಲಿಡುತ್ತಿದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಕಳೆದ 2 ವರ್ಷಗಳಲ್ಲಿ ಪೆಟ್ರೋಲ್ ದರ ಇದುವರೆಗಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ 1 ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿ 101 ರೂ.ನತ್ತ ಸಾಗಿದೆ. ಇದು ಇದುವರೆಗೂ ದಾಖಲಾದ ಅತಿ ಹೆಚ್ಚಿನ ಪೆಟ್ರೋಲ್ ಬೆಲೆ ಎನ್ನಲಾಗಿದೆ. ಹಾಗಂತ ಇನ್ನೂ ಬೆಲೆಯೇರಿಕೆ ಕಡಿಮೆಯಾಗಿಲ್ಲ. ಬೇರೆ ರಾಜ್ಯಗಳಲ್ಲಿ ಕೂಡ ಪೆಟ್ರೋಲ್ ಬೆಲೆ 100ರ ಗಡಿಯತ್ತ ದಾಪುಗಾಲಿಡುತ್ತಿದೆ. ಇಂದು ಕೂಡ ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳವಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಕಳೆದ 1 ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಕಳೆದೊಂದು ವಾರದಿಂದ ಮಹಾರಾಷ್ಟ್ರದ ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ರಾಜಸ್ಥಾನದ ಜೈಪುರ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿದೆ. ಈ ಮೂಲಕ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್ ದರ ಏರಿಕೆಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 95.09 ರೂ. ಇದೆ. ಮುಂಬೈನಲ್ಲಿ 101.03 ರೂ, ಜೈಪುರದಲ್ಲಿ 101.59 ರೂ, ಬೆಂಗಳೂರಿನಲ್ಲಿ 98.20 ರೂ, ಹೈದರಾಬಾದ್​ನಲ್ಲಿ 99.08 ರೂ, ತಿರುವನಂತಪುರದಲ್ಲಿ 96.47 ರೂ, ಚೆನ್ನೈನಲ್ಲಿ 96.23 ರೂ, ಕೊಲ್ಕತ್ತಾದಲ್ಲಿ 94.76 ರೂ. ಇದೆ. ಮಧ್ಯಪ್ರದೇಶದ ಭೂಪಾಲ್​ನಲ್ಲಿ 1 ಲೀಟರ್ ಪೆಟ್ರೋಲ್​ಗೆ 103.17 ರೂ. ಇದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 105.33 ರೂ. ಆಗಿದೆ. ಹೈದರಾಬಾದ್​ನಲ್ಲೂ ಇನ್ನೆರಡು ದಿನಗಳಲ್ಲಿ ಪೆಟ್ರೋಲ್ ದರ ಶತಕ ಬಾರಿಸಲಿದೆ. ಕೇರಳದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 100 ರೂ. ದಾಟಿದೆ.

ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಭುವನೇಶ್ವರ, ತಿರುವನಂತಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 93 ರೂ. ದಾಟಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 86.01 ರೂ. ಇದೆ. ಚೆನ್ನೈನಲ್ಲಿ 90.38 ರೂ, ಮುಂಬೈನಲ್ಲಿ 93.35 ರೂ, ಬೆಂಗಳೂರಿನಲ್ಲಿ 90.81 ರೂ, ಹೈದರಾಬಾದ್​ನಲ್ಲಿ 93.38 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಕೊರೋನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್​ಡೌನ್​ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ.

ಭಾರತದಲ್ಲಿ ಕೊರೋನಾ ವೈರಸ್ ಅಬ್ಬರದಿಂದ ಕಳೆದೊಂದು ವರ್ಷದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಆದಾಯವನ್ನು ಸರಿದೂಗಿಸಲು ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಹಾಗೇ, ಇಂಧನದ ಆಮದಿನ ಪ್ರಮಾಣವೂ ಇಳಿಕೆಯಾಗಿದೆ. ಪೆಟ್ರೋಲ್- ಡೀಸೆಲ್ ಬೆಲೆಯ ಹೆಚ್ಚಳ ಎಲ್ಲದರ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಕಾರು, ಬೈಕ್ ಸೇರಿದಂತೆ ಬಹುತೇಕ ಎಲ್ಲ ವಾಹನಗಳ ಬೆಲೆಯೂ ಹೆಚ್ಚಳವಾಗಿದೆ.

Exit mobile version