New Delhi : ಮನೆಯ ಮೇಲ್ಛಾವಣಿ ಮೇಲೆ ಸೌರ ವ್ಯವಸ್ಥೆ ಅಳವಡಿಸುವ ಪಿಎಂ ಸೂರ್ಯಘರ್ ಯೋಜನೆಗೆ (PM Suryaghar Rooftop Solar Scheme) ಸರ್ಕಾರದಿಂದ 75,000 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ. ಇದರೊಂದಿಗೆ, ಯೋಜನೆ ಅತಿಶೀಘ್ರದಲ್ಲೇ ಚಾಲನೆಗೆ ಬರುವುದು ಸನ್ನಿಹಿತವಾಗಿದೆ. ಪಿಎಂ ಸೂರ್ಯಘರ್ ಯೋಜನೆಯಲ್ಲಿ ಒಂದು ಮನೆಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸಲು ಈ ಯೋಜನೆಯ ಗುರಿಯಾಗಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಸಚಿವ ಅನುರಾಗ್ ಠಾಕೂರ್ (Anurag Thakur), ಮೇಲ್ಛಾವಣಿ ಸೋಲಾರ್ ಅಳವಡಿಸುವ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದಾಗಿ ವಿದ್ಯುತ್ ಉತ್ಪಾದನೆಯೊಂದಿಗೆ 17 ಲಕ್ಷ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.
ಅಲ್ಲದೇ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ಕುಟುಂಬಗಳಿಗೆ 2 ಕಿಲೋವ್ಯಾಟ್ಗೆ ಶೇ.60ರಷ್ಟು ಅಂದರೆ 60 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಮತ್ತು 2 ರಿಂದ 3 ಕಿಲೋವ್ಯಾಟ್ಗೆ ಶೇ.40ರಷ್ಟು ಅಂದರೆ 78 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಸಹಾಯಧನ ಒದಗಿಸಲಾಗುತ್ತದೆ. ಅಲ್ಲದೇ ಇದರ ಅಳವಡಿಕೆಗಾಗಿ ಮನೆಗಳು ಶೇ.7ರಷ್ಟು ಬಡ್ಡಿದರದಲ್ಲಿ ಸಾಲವನ್ನು ಸಹ ಪಡೆದುಕೊಳ್ಳಬಹುದು. ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಒಂದು ಸೌರಗ್ರಾಮವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ಪಿಎಂ ಸೂರ್ಯ ಘರ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmsuryaghar.gov.in
• ಅಪ್ಲೈ ಫಾರ್ ರೂಫ್ಟಾಪ್ ಸೋಲಾರ್ ಅನ್ನು ಕ್ಲಿಕ್ ಮಾಡಿ ಬಳಿಕ ರಾಜ್ಯದ ಹೆಸರು, ಡಿಸ್ಕಾಂ ಹೆಸರು, ನಿಮ್ಮ ಮನೆಯ ವಿದ್ಯುತ್ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ (Mobile Number) ಮತ್ತು ಇಮೇಲ್ ಅನ್ನು ನಮೂದಿಸಿ ನೊಂದಾಯಿಸಿಕೊಳ್ಳಬೇಕು.
• ನೊಂದಾವಣಿ ಆದ ಬಳಿಕ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು.
• ಈಗ ರೂಫ್ಟಾಪ್ ಸ್ಕೀಮ್ಗೆ (Rooftop) ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕಾಗುತ್ತದೆ.
• ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗಿ, ಅನುಮೋದನೆ ಆಗುವವರೆಗೂ ಕಾಯಬೇಕಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ನಿಮ್ಮ ಡಿಸ್ಕಾಮ್ಗೆ ನೊಂದಾಯಿತವಾದ ಯಾವುದಾದರೂ ಸೋಲಾರ್ ಕಂಪನಿಯವರು ಬಂದು ಮನೆಗೆ ಸೋಲಾರ್ ಅಳವಡಿಸುತ್ತಾರೆ.