ಪ್ರಥಮ ಟೆಸ್ಟ್: ವಿಲಿಯಂಸನ್, ಟೇಲರ್ ಉತ್ತಮ ಬ್ಯಾಟಿಂಗ್

ಮೌಂಟ್ ‌ಮೌಂಗನ್ಯುಯಿ, ಡಿ. 26: ನಾಯಕ ಕೇನ್ ವಿಲಿಯಂಸನ್(ಅಜೇಯ 94) ಹಾಗೂ ಅನುಭವಿ ಆಟಗಾರ ರಾಸ್ ಟೇಲರ್(70) ಅವರ ಜವಾಬ್ದಾರಿಯುತ ಆಟದಿಂದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ‌ದಿನದಾಟದಲ್ಲಿ ನ್ಯೂಜಿ಼ಲೆಂಡ್ ಮೇಲುಗೈ ಸಾಧಿಸಿದೆ.

ಇಲ್ಲಿನ ಬೇ ಓವಲ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭದಲ್ಲಿ ಪಾಕಿಸ್ತಾನದ ಯುವ ವೇಗದ ಬೌಲರ್ ‌ಶಹೀನ್ ಅಫ್ರೀದಿ(55ಕ್ಕೆ 3) ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡಿದರು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಟಾಮ್ ಲ್ಯಾಥಂ(4) ಹಾಗೂ ಟಾಮ್ ಬ್ಲೆಂಡಲ್(5) ಬಹುಬೇಗನೆ ನಿರ್ಗಮಿಸಿದರು.

ಆದರೆ ನಂತರ ‌ಜೊತೆಯಾದ ವಿಲಿಯಂಸನ್ ಹಾಗೂ ಟೇಲರ್ 3ನೇ ವಿಕೆಟ್‌ಗೆ 120 ರನ್‌ಗಳ ಭರ್ಜರಿ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಟೇಲರ್(70) ಅವರ ವಿಕೆಟ್ ಕಬಳಿಸಿದ ಶಹೀನ್ ಅಫ್ರೀದಿ, ಮತ್ತೊಮ್ಮೆ ಪಾಕ್ ತಂಡಕ್ಕೆ ಮುನ್ನಡೆ ಒದಗಿಸಿದರು. ಬಳಿಕ 4ನೇ ವಿಕೆಟ್‌ಗೆ ಜೊತೆಯಾದ ವಿಲಿಯಂಸನ್ ಹಾಗೂ ಹೆನ್ರಿ ನಿಕೋಲ್ಸ್(ಅಜೇಯ 42) ಮುರಿಯದ 89 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.‌

ಪರಿಣಾಮ ಮೊದಲ ದಿನದಂತ್ಯಕ್ಕೆ ನ್ಯೂಜಿ಼ಲೆಂಡ್ 87 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್‌ಗಳಿಸಿದೆ.‌ ಉತ್ತಮ ‌ಫಾರ್ಮ್ ಕಂಡುಕೊಂಡಿರುವ ಕೇನ್ ವಿಲಿಯಂಸನ್ 94 ರನ್‌ಗಳಿಸಿ ಶತಕದ ಹೊಸ್ತಿಲಲ್ಲಿದ್ದರೆ, ನಿಕೋಲ್ಸ್ 42 ರನ್‌ಗಳಿಸಿ ಅರ್ಧಶತಕದತ್ತ ಮುಖ ಮಾಡಿದ್ದಾರೆ. ಪಾಕಿಸ್ತಾನದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶಹೀನ್ ಅಫ್ರೀದಿ ‌3 ವಿಕೆಟ್ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

Exit mobile version