ದೆಹಲಿ ಆಡಳಿತದಲ್ಲಿ ಕೇಂದ್ರದ ಹಿಡಿತ ಬಲಪಡಿಸುವ ಎನ್ ಸಿಟಿಡಿಬಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ದೆಹಲಿ, ಮಾ. 29: ರಾಷ್ಟ್ರ ರಾಜಧಾನಿ ದೆಹಲಿಯ ಆಡಳಿತದಲ್ಲಿ ಲೆಫ್ಟಿನೆಂಟ್​ ಗವರ್ನರ್​ಗೆ ಹೆಚ್ಚಿನ ಅಧಿಕಾರ ನೀಡುವ ಜಿಎನ್​ಸಿಟಿಡಿ (ತಿದ್ದುಪಡಿ) ಮಸೂದೆಗೆ (National Capital Territory of Delhi (Amendment) Bill – NCTDB) ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ಸಿಕ್ಕಿದೆ. ಇದರೊಂದಿಗೆ ಈ ಮಸೂದೆಗೆ ಕಾನೂನಿನ ಮಾನ್ಯತೆ ದೊರೆತಿದೆ. ಕಳೆದ ಬುಧವಾರ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿಸಿಕೊಂಡಿತ್ತು. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಸಭಾತ್ಯಾಗ ಮಾಡಿದ್ದವು.

ಜಿಎನ್​ಸಿಟಿಡಿ (ತಿದ್ದುಪಡಿ) ಮಸೂದೆಯು ದೆಹಲಿಯಲ್ಲಿ ಸರ್ಕಾರ ಎಂದರೆ ಲೆಫ್ಟಿನೆಂಟ್ ಗವರ್ನರ್ ಎಂದು ವ್ಯಾಖ್ಯಾನಿಸುತ್ತದೆ. ದೆಹಲಿ ಸರ್ಕಾರವು ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ತೆಗೆದುಕೊಳ್ಳುವುದು ಕಡ್ಡಾಯಗೊಳಿಸುತ್ತದೆ.

ಈ ಮಸೂದೆಯು ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (ಆಪ್) ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 2013ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಆಪ್ ಸರ್ಕಾರವು ಪದೇಪದೆ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಂಘರ್ಷ ಮಾಡಿಕೊಳ್ಳುತ್ತಿತ್ತು.

ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಸದನದಲ್ಲಿದ್ದ ಒಟ್ಟು ಸದಸ್ಯರ ಪೈಕಿ 83 ಮಂದಿ ಮಸೂದೆಯ ಪರವಾಗಿ ಮತ್ತು 45 ಮಂದಿ ವಿರುದ್ಧವಾಗಿ ಮತಚಲಾಯಿಸಿದರು. ಮಸೂದೆ ಅಂಗೀಕಾರಗೊಳ್ಳುವ ಕೆಲವೇ ನಿಮಿಷಗಳ ಮೊದಲು ಕಾಂಗ್ರೆಸ್ ಸದನದಿಂದ ಹೊರನಡೆದಿತ್ತು. ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಶಿವಸೇನಾ, ಜನತಾ ದಳ, ವೈಎಸ್​ಆರ್ ಕಾಂಗ್ರೆಸ್ ಮತ್ತು ಅಕಾಲಿದಳ ಪಕ್ಷಗಳೂ ಈ ಮಸೂದೆಯನ್ನು ವಿರೋಧಿಸಿದ್ದವು.

Exit mobile version