ಪ್ರಾಥಮಿಕ ಶಾಲೆ ಆರಂಭ ಹಿನ್ನಲೆ, ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು

ಬೆಂಗಳೂರು ಅ 25 : ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಪ್ರಾರಂಭವಾದ ಹಿನ್ನಲೆಯಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದರು.  ಕೊರೊನಾ ಭೀತಿ ದೂರವಾಗಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಧೈರ್ಯವಾಗಿಯೇ ಶಾಲೆಗಳಿಗೆ ಕಳುಹಿಸಿದ್ದು ಕಂಡುಬಂದಿತು .ಭೌತಿಕ ತರಗತಿಗಳು ಆರಂಭಗೊಂಡಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಕೇಳಿಬಂದಿತು.

ಕೊರೊನಾ ಹಿನ್ನಲೆಯಲ್ಲಿ ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿರಬೇಕು ಎಂದು ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಪೋಷಕರ ಒಪ್ಪಿಗೆ ಪತ್ರ ನೀಡಿದ ಮಕ್ಕಳು ಸಾಲಾಗಿ ನಿಂತು ಅದನ್ನು ಶಾಲಾ ಸಿಬ್ಬಂದಿಗೆ ತೋರಿಸಿ ಒಳ ಬರುತ್ತಿದ್ದರು. ಬಹುತೇಕ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗಳನ್ನು ಆರಂಭಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಆರಂಭವಾದ ಬಹುತೇಕ ತರಗತಿಗಳಿಗೆ ಬಹುತೇಕ ಹಾಜರಾತಿ ಕಂಡುಬಂತು.

ಎರಡು ಡೋಸ್ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧ ದಿನ ಮಾತ್ರ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವುದಿಲ್ಲ.

ನವೆಂಬರ್ 2ರಿಂದ ಪೂರ್ಣಾವ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶಾಲೆಗೆ ಬಂದ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿ ಒಳಬಿಡಲಾಗುತ್ತಿತ್ತು. ಕಡ್ಡಾವಾಗಿ ಮಾಸ್ಕ್ ಧರಿಸುವುದು, ಕನಿಷ್ಟ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಚನೆ ನೀಡಿದರು. ಮನೆಯಲ್ಲೇ ಇದ್ದು ಮೊಬೈಲ್, ಲ್ಯಾಪ್‍ಟಾಪ್‍ಗಳಲ್ಲಿ ಆನ್‍ಲೈನ್ ಕ್ಲಾಸ್‍ಗಳಲ್ಲೇ ತಲ್ಲೀನರಾಗಿದ್ದ ಚಿಣ್ಣರು ಇಂದು ಶಾಲೆಯ ವಾತಾವರಣ ನೋಡುತ್ತಿದ್ದಂತೆ ಪುಳಕಿತರಾಗಿ ತಮ್ಮ ಸ್ನೇಹಿತರೊಂದಿಗೆ ಸಂತಸದಿಂದ ಮಾತನಾಡುತ್ತ ಕಾಲ ಕಳೆದ ಸನ್ನಿವೇಶಗಳು ಕಂಡುಬಂದಿತು.

Exit mobile version