ದಾದಿಯರ ನಿಸ್ವಾರ್ಥ ಸೇವೆ ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ,  ಮೇ. 12: ಅಂತರರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಬುಧವಾರ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಸಾಂಕ್ರಾಮಿಕ ಸಂದರ್ಭದಲ್ಲಿ ದಾದಿಯರ ನಿಸ್ವಾರ್ಥ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ವೆಂಕಯ್ಯ ನಾಯ್ಡು,’ ಯಾವುದೇ ಬಿಡುವು ತೆಗೆದುಕೊಳ್ಳದೇ ನಿಸ್ವಾರ್ಥ ಭಾವನೆಯಿಂದ ದಾದಿಯರು ಜನರ ಸೇವೆ ಮಾಡಿದ್ದಾರೆ. ಪಿಡುಗಿನ ಸಂದರ್ಭದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ದಾದಿಯರು ನಮ್ಮ ಆರೋಗ್ಯ ವ್ಯವಸ್ಥೆಯ ಪ್ರಮುಖ ಕೊಂಡಿ’ ಎಂದು ಶ್ಲಾಘಿಸಿದ್ದಾರೆ.

‘ಆರೋಗ್ಯವಂತ ಭಾರತದ ಬಗ್ಗೆ ದಾದಿಯರ ಕರ್ತವ್ಯ ಪ್ರಜ್ಞೆ, ಸಹಾನುಭೂತಿ ಮತ್ತು ಬದ್ಧತೆ ಅಸಾಧಾರಣವಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದಾದಿಯರು ಮುಂಚೂಣಿಯಲ್ಲಿದ್ದರು. ಈ ಅಂತರರಾಷ್ಟ್ರೀಯ ದಾದಿಯರ ದಿನದಂದು ಅವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ’ ಎಂದು ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಆಧುನಿಕ ನರ್ಸಿಂಗ್ ವಿಜ್ಞಾನಕ್ಕೆ ಅನುಪಮ ಕೊಡುಗೆ ನೀಡಿದ ಶ್ರೇಷ್ಠ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಮೇ 12. ಈ ದಿನವನ್ನು ಅಂತರರಾಷ್ಟ್ರೀಯ ದಾದಿಯರ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ.

Exit mobile version