ಹರ್ಷನ ಕುಟುಂಬಕ್ಕೆ 25 ಲಕ್ಷ ಯಾವ ಆಧಾರದ ಮೇಲೆ ಕೊಟ್ರಿ ಬೊಮ್ಮಾಯಿಯವರೇ? : ಖರ್ಗೆ!

priyankkharge

ಇತ್ತೀಚಿಗೆ ಶಿವಮೊಗ್ಗದಲ್ಲಿ(Shivmoga) ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ(Harsha) ಕುಟುಂಬಕ್ಕೆ ರಾಜ್ಯ ಸರ್ಕಾರ(State Government) 25 ಲಕ್ಷ ರೂಪಾಯಿ ನೆರವನ್ನು ನೀಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್(Congress) ನಾಯಕ ಪ್ರಿಯಾಂಕ್ ಖರ್ಗೆ(Priyank Karghe) “ಹರ್ಷನ ಕುಟುಂಬಕ್ಕೆ ಯಾವ ಆಧಾರದ ಮೇಲೆ 25 ಲಕ್ಷ ರೂಪಾಯಿ ಹಣವನ್ನು ನೀಡಿದ್ದೀರಿ” ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿಯಾಗಿ ವೈಯಕ್ತಿಕ ದ್ವೇಷದಿಂದ ಹತ್ಯೆಯಾದವರಿಗೆ ನೀಡುತ್ತಿದೆ.

ರಾಜ್ಯದಲ್ಲಿ ವೈಯಕ್ತಿಕ ಕಾರಣದಿಂದ ಹತ್ಯೆಯಾದ ಎಲ್ಲರಿಗೂ ಇದೇ ರೀತಿಯಾಗಿ ಪರಿಹಾರವನ್ನು ಬಿಜೆಪಿ ಸರ್ಕಾರ ನೀಡುತ್ತದೆಯೇ? ಎಂದು ಟೀಕಿಸಿದ್ದಾರೆ. ಇನ್ನು ಹತ್ಯೆಯಾದ ಹರ್ಷನ ಮೇಲೆ ಅನೇಕ ಗಂಭೀರ ಪ್ರಕರಣಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು, ಹರ್ಷನ ಹತ್ಯೆ ವೈಯಕ್ತಿಕ ಕಾರಣಗಳಿಂದಾಗಿದೆ ಎಂದಿದ್ದಾರೆ. 2020ರಲ್ಲಿ ಬಿಜೆಪಿ ಸರ್ಕಾರವೇ ಆತನನ್ನು ಜೈಲಿಗೆ ಕಳುಹಿಸಿತ್ತು. ಇಡೀ ಪ್ರಕರಣದ ಕುರಿತು ಇನ್ನೂ ಪೋಲಿಸ್ ವರದಿ ಬಂದಿಲ್ಲ.

ಹೀಗಿರುವಾಗ ಬೊಮ್ಮಾಯಿ ಸರ್ಕಾರ 25 ಲಕ್ಷ ರೂಪಾಯಿ ಸಾರ್ವಜನಿಕರ ಹಣವನ್ನು ಕೊಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ್ದಾರೆ. ಕೋವಿಡ್‍ನಿಂದ ಮೃತಪಟ್ಟ ಬಡ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಆದರೆ ಹರ್ಷನ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಹತ್ಯೆಯಾದ ಕುಟುಂಬಗಳಿಗೆ ಪರಿಹಾರ ನೀಡುವಷ್ಟು ಉದಾರ ಮನಸ್ಸು ನಿಮಗಿದ್ದರೆ, ಧರ್ಮಸ್ಥಳದ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ?

ಭಜರಂಗದಳದವರಿಂದ ಹತ್ಯೆಯಾದ ಸಮೀರ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ? ಇನ್ನು ಸೇನೆಯಲ್ಲಿ ಮಡಿದ ಕೊಡಗಿನ ವೀರ ಯೋಧ ಅಲ್ತಾಫ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ? ಕಡೆಪಕ್ಷ ಆ ಯೋಧನ ಕುಟುಂಬಕ್ಕೆ ಕನಿಷ್ಠ ಸಾಂತ್ವನವನ್ನು ನಿಮ್ಮ ಸರ್ಕಾರ ಹೇಳಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅನಾರೋಗ್ಯ ಪೀಡಿತರಿಗೆ, ಬಡವರಿಗೆ, ಮೃತ ಯೋಧರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು.

ಹಾಗೇ ಪರಿಹಾರ ನೀಡುವಾಗ ವಿವೇಚನೆಯನ್ನು ಬಳಸಬೇಕು. ಆದರೆ ಇಲ್ಲಿ ಬೊಮ್ಮಾಯಿಯವರು ಯಾವುದೇ ವಿವೇಚನೆ ಇಲ್ಲದೇ, ಸಾರ್ವಜನಿಕರ ತೆರಿಗೆ ಹಣವನ್ನು ಬಳಸುತ್ತಿದ್ದಾರೆ. ಗಾಂಧಿಯನ್ನು ಕೊಂದ ಗೋಡ್ಸೆ ಆರಾಧಕನಿಗೆ ಪರಿಹಾರ ನೀಡಿರುವುದು ನಿಜಕ್ಕೂ ದುರಂತ. ನಿಮ್ಮ ಪಕ್ಷದ ವತಿಯಿಂದ 25 ಲಕ್ಷವಲ್ಲ, 25 ಕೋಟಿ ಪರಿಹಾರ ನೀಡಿ, ನಮಗೆ ಚಿಂತೆಯಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ದುರ್ಬಳಕೆ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.

Exit mobile version