ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳಿಗೆ ಧರ್ಮ ಹೊಣೆಯಲ್ಲ!

Protest

ಶುಕ್ರವಾರದ ಪವಿತ್ರ ಪ್ರಾರ್ಥನೆಯ ನಂತರ ದೇಶಾದ್ಯಂತ ಕಲ್ಲು ತೂರಾಟ ಮತ್ತು ಹಿಂಸಾಚಾರ ನಡೆದಿದೆ. ದೇಶದ ಅನೇಕ ಕಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಮೂಲಕ ಮತಾಂಧ ಮನಸ್ಥಿತಿಗಳು, ದೇಶದ ಆಂತರಿಕ ಭದ್ರತೆಗೆ ಸವಾಲು ಹಾಕಿದ್ದಾರೆ.


ಧರ್ಮದ ಮತಾಂಧತೆ ದೇಶವನ್ನೇ ಸುಡುವ ಅಪಾಯಕ್ಕೆ ಈ ರೀತಿಯ ಘಟನೆಗಳು ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಮನೆಯೊಳಗಿರಬೇಕಿದ್ದ ಧರ್ಮ ಬೀದಿಗೆ ಬಿದ್ದಿದೆ. ಕಲ್ಲು ತೂರಾಟಕ್ಕೆ ಪ್ರಚೋದಿಸುವ ಮೂಲಕ ಮತಾಂಧರನ್ನು ಸೃಷ್ಟಿಸುತ್ತಿದೆ. ಶಾಂತಿ-ಸಹಬಾಳ್ವೆಯ ಧರ್ಮವೊಂದು ದಾರಿ ತಪ್ಪುತ್ತಿದೆ. ಪ್ರಾರ್ಥನೆಯ ನಂತರ ಶಾಂತಿ ನೆಲೆಸಬೇಕಾದ ಮನದಲ್ಲಿ ಬೆಂಕಿ ಹಚ್ಚುವ ವಿಕೃತ ಸೃಷ್ಟಿಯಾದದ್ದು ಹೇಗೆ..? ಸಹಬಾಳ್ವೆಯ ತತ್ವ ಬೋಧಿಸಬೇಕಾದ ತಾಣಗಳು, ಬೆಂಕಿ ಹಚ್ಚಲು ಪ್ರಚೋದಿಸುವ ಕೇಂದ್ರಗಳಾಗುತ್ತಿರುವು ಹೇಗೆ..? ಎಂಬ ಪ್ರಶ್ನೆ ಮೂಡುತ್ತದೆ.

ದೇಶಕ್ಕಿಂತ ಧರ್ಮದ ಹೆಸರಿನ ಮತಾಂಧತೆ ಏನೆಲ್ಲವನ್ನೂ ಮಾಡಿಸುತ್ತದೆ ಎಂಬುದಕ್ಕೆ ಶುಕ್ರವಾರ ನಡೆದ ಹಿಂಸಾಚಾರ ಸಾಕ್ಷಿಯಾಗಿ ನಿಲ್ಲುತ್ತದೆ. ದೇಶ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ‘ನೀವಿರುವ ನೆಲವನ್ನು ಪ್ರೀತಿಸಿ, ಆ ನೆಲದ ಕಾನೂನಿಗೆ ಗೌರವ ನೀಡುವುದು ನಿಮ್ಮ ಕರ್ತವ್ಯ’ ಎಂದು ಪ್ರವಾದಿಗಳೇ ಹೇಳಿರುವ ಮಾತು ಮತಾಂಧ ಮನಸ್ಥಿತಿಗಳಿಗೆ ಮನವರಿಕೆಯಾಗಿಲ್ಲ.

ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳಿಗೆ ಧರ್ಮ ಹೊಣೆಯಲ್ಲ. ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳನ್ನು ಆ ಧರ್ಮದ ನಿಷ್ಠಾವಂತರೇ ಖಂಡಿಸಬೇಕು.

Exit mobile version