ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ: ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ: ಸಿಎಂ ಹೇಳಿಕೆ

ಬೆಂಗಳೂರು, ಡಿ. 23: ರಾಜ್ಯದಲ್ಲಿ ರೂಪಾಂತರಗೊಂಡ ಹೊಸ ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಒಂಬತ್ತು ದಿನಗಳ ಕಾಲ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರೂಪಾಂತರಗೊಂಡಿರುವ ಕೊರೋನಾ ವೈರಾಣು ಕಾರಣ ಜನವರಿ ೨ ವರೆಗೆ ನೈಟ್ ಕರ್ಪ್ಯೂ ವಿಧಿಸಲಾಗಿದ್ದು, ಇದಕ್ಕೆ ಎಲ್ಲಾ ಸಾರ್ವಜನಿಕರು ಸಹಕರಿಸಬೇಕಿದ್ದು, ಇದಕ್ಕೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿ ನಂತರ ಬಿಡುಗಡೆ ‌ಮಾಡುತ್ತೇವೆ. ಆದರೆ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈಗಿನ ಬೆಳವಣಿಗೆಗಳ ಪ್ರಕಾರ ಜನವರಿ 1 ರಿಂದ ಶಾಲೆ ಆರಂಭವಾಗಲಿದ್ದು, ಎರಡು ಮೂರು ದಿನಗಳಲ್ಲಿ ಏನದರೂ ಬೆಳವಣಿಗೆ ಆದರೆ ನಂತರ ತಿಳಿಸುತ್ತೇವೆ ಎಂದರು.

ಇದೇ ವೇಲೆ ಸಚಿವ ಡಾ. ಸುಧಾಕರ್ ಮಾತನಾಡಿ, ತಜ್ಞರ ಸಲಹೆ, ಕೇಂದ್ರ ಸರ್ಕಾರದ ಆಶಯದಂತೆ ತೀರ್ಮಾನ ಘೋಷಣೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ನೈಟ್ ಕರ್ಪ್ಯೂ ವಿಧಿಸಲಾಗಿದ್ದು, ಎಲ್ಲಾ ಚಟುವಟಿಕೆಗಳು ರಾತ್ರಿ 10 ರೊಳಗೆ ಮುಗಿಸಬೇಕಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹೊಸ ವರ್ಷ, ಹಬ್ಬ, ಸಂಭ್ರಮ ನಿಷೇಧ ಮಾಡಲಾಗಿದೆ.

ಇನ್ನೂ ಯುಕೆ ಮೂಲದಿಂದ ಬಂದವರ ಮೇಲೆ 28 ದಿನಗಳ ಕಾಲ ನಿಗಾವಹಿಸಿದ್ದು, ಈಗಾಗಲೇ ದಿನ ಕಳೆದವರು ಅವರ ಮೇಲೆ ಅವರೇ ನಿಗಾ ಇಟ್ಟುಕೊಳ್ಳಬೇಕು, 14 ದಿನಗಳಲ್ಲಿ ಬಂದಿರುವವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ಇಡಲಿದ್ದಾರೆ. ಯಾವುದೇ ನಾಯಕರು ಕೋವಿಡ್ ವಿಚಾರದಲ್ಲಿ ಹೇಳಿಕೆ ನೀಡುವಾಗ ಸರಿಯಾದ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಸರ್ಕಾರ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ, ಪ್ರಯಾಣಿಕರ ಸಂಖ್ಯೆಯಲ್ಲಿ ಮರೆಮಾಚಿಲ್ಲ. ಎರಡು ವಿಮಾನಗಳು ಮಾತ್ರ ಬಂದಿವೆ, ಬ್ರಿಟಿಷ್ ಏರ್ ವೇಸ್, ಏರ್ ಇಂಡಿಯಾ. ಬೆಂಗಳೂರಿನಲ್ಲಿ ರೂಪಾಂತರದ ಪರೀಕ್ಷೆ ಮಾಡಲು ನಾಲ್ಕು ಸಂಸ್ಥೆಗಳಲ್ಲಿ ಅವಕಾಶ ಇದೆ. ನವೆಂಬರ್ 25 ರಿಂದ ಇವತ್ತಿನವರೆಗೆ 2500 ಸಾವಿರ ಜನ ಇಂಗ್ಲೆಂಡ್ ನಿಂದ ಬಂದಿದ್ದಾರೆ. ಕೊರೋನಾ ಪಾಸಿಟಿವ್ ಬಂದರೆ ಮಾತ್ರ ಎಸ್ ಜೀನ್ ಟೆಸ್ಟ್ ಮಾಡಲಾಗುತ್ತದೆ ಎಂದ‌ ಅವರು, ನೈಟ್ ಕರ್ಪ್ಯೂ ಸಂದರ್ಭದ ಏನಿರುತ್ತೆ ಏನಿರಲ್ಲ ಎಂಬ ಬಗ್ಗೆ ಇಂದು ಸಂಜೆ ವೇಳೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಲಿದೆ. ಎಲ್ಲಾ ಸೇವೆಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತದೆ. ಈಗಾಗಲೇ ಬ್ರಿಟನ್ ‌ನಿಂದ ಬಂದಿರುವವರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. 138 ಜನರ ಲಿಸ್ಟ್ ನಮ್ಮ ಬಳಿ ಇದೆ.
ಎಸ್ ಜೀನ್ ಟೆಸ್ಟ್ ಗೆ ಹೆಚ್ಚು ವರಿ ಶುಲ್ಕ ಇಲ್ಲ ಎಂದರು.

Exit mobile version