ಬಾಲಕಿಯ ಮೇಲೆ ಅತ್ಯಾಚಾರ, RSS ಮುಖಂಡನ ಮೇಲೆ ಆರೋಪ

ಮಂಗಳೂರು ಅ.15: ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿ, ಆಕೆ ಮಗುವಿಗೆ ಜನ್ಮವಿತ್ತ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದ್ದು, ಘಟನೆಗೆ ಆರೆಸ್ಸೆಸ್ ಮುಖಂಡ ನಾರಾಯಣ ರೈ ಎಂಬವರೇ ಕಾರಣ ಎಂದು ದಲಿತ ಸಂಘಟನೆಗಳು ಆರೋಪಿಸಿವ. ಈ ಬಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಲಾಗಿದ್ದು ಸಂತ್ರಸ್ತ ಬಾಲಕಿ ಮತ್ತು ಆಕೆಯ ಹೆತ್ತವರು ಕೂಡ ಪಾಲ್ಗೊಂಡಿದ್ದರು.

ನಾರಾಯಣ ರೈ ಎಂಬವರಿಗೆ ಸೇರಿದ ತೋಟಕ್ಕೆ ಬಾಲಕಿ ಕೆಲಸಕ್ಕೆ ಹೋಗುತ್ತಿದ್ದಾಗ ಹುಡುಗಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಅತ್ಯಾಚಾರ ನಡೆಸಿದ್ದಾರೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಕಳೆದ ಸೆ 4 ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಈ ಬಗ್ಗೆ ಪುತ್ತೂರು ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದರೂ, ಅಲ್ಲಿ ಪ್ರಕರಣವನ್ನು ಪೊಲೀಸರು ತಿರುಚಿದ್ದಾರೆ. ಆರೋಪಿಯ ಪ್ರಭಾವಕ್ಕೊಳಗಾಗಿ ಪೊಲೀಸರು ಪ್ರಮೋದ್ ಎಂಬ ಯುವಕನ ಹೆಸರನ್ನು ಅದರಲ್ಲಿ ನಮೂದಿಸಿದ್ದಾರೆ. ಆರೋಪಿ ನಾರಾಯಣ ರೈ ಹೆಸರನ್ನು ಪ್ರಕರಣದಿಂದ ಹೊರಗಿಡಲು ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಸಮಿತಿಯ ಮುಖಂಡ ಆನಂದ ಬೆಳ್ತಾರೆ ಆರೋಪಿಸಿದರು.

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಾಲಕಿ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ನಾರಾಯಣ ರೈ ಹೆಸರು ಹೇಳಿದರೆ, ಕೇಸು ಹಾಕಿ ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಸಂಪ್ಯ ಠಾಣೆ ಪೊಲೀಸರು ಆರೋಪಿಯನ್ನು ರಕ್ಷಿಸುವುದಕ್ಕಾಗಿ ಘಟನೆಗೆ ಸಂಬಂಧವಿಲ್ಲದ ಪ್ರಮೋದ್ ಎನ್ನುವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧಿಸಿ ಬಾಲಕಿಯ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದು, ಅವರ ಸೂಚನೆಯಂತೆ ನಾರಾಯಣ ರೈ ವಿರುದ್ಧ ದಲಿತ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಪೊಲೀಸರು ಪ್ರಕರಣದ ನೈಜಾಂಶ ಅರಿಯುವುದಕ್ಕಾಗಿ ಮಗು ಮತ್ತು ಆರೋಪಿ ನಾರಾಯಣ ರೈ ಇಬ್ಬರದ್ದೂ ಡಿಎನ್‌ಎ ಟೆಸ್ಟ್ ಮಾಡಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಎಸ್ಟಿ ಋಷಿಕುಮಾರ್‌ ಸೋನವಾಣಿ ಬಳಿ ಕೇಳಿದರೆ, ಯಾವುದೇ ಪ್ರಕರಣಕ್ಕೂ ಒಂದು ಪ್ರೊಸೀಜರ್ ಇರುತ್ತದೆ. ಆರೋಪ ಬಂದ ಕೂಡಲೇ ಬಂಧಿಸಲೇಬೇಕು ಎನ್ನುವುದಿಲ್ಲ. ಕೆಲವು ಸಾಕ್ಷಗಳನ್ನು ಕಲೆಹಾಕಿ ಬಂಧನ ಪ್ರಕ್ರಿಯೆ ನಡೆಸಲಾಗುತ್ತದೆ. ಆ ವ್ಯಕ್ತಿಯ ಬಗ್ಗೆ ಆರೋಪ ಕೇಳಿಬಂದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಡಿಎನ್‌ಎ ಟೆಸ್ಟ್ ಮಾಡಲು ಮಗುವಿಗೆ ಮೂರು ತಿಂಗಳ ಆಗಬೇಕು. ಆನಂತರ, ಅದನ್ನೂ ಮಾಡುತ್ತೇವೆ. ಇವರು ಅವಸರ ಮಾಡಿದರೆ ನಾವೇನು ಮಾಡೋಕೆ ಆಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Exit mobile version