ಆಸ್ಟ್ರೇಲಿಯಾದಲ್ಲಿ ಇಲಿಗಳ ಹಾವಳಿ: ಪ್ಲೇಗ್‌ ಭೀತಿ ಹಿನ್ನೆಲೆ ಭಾರತದ ಬಳಿ ನಿಷೇಧಿತ ವಿಷಕ್ಕೆ ಬೇಡಿಕೆ

ಸಿಡ್ನಿ, ಮೇ. 31: ಮಹಾಮಾರಿ ಕೊರೊನಾ‌ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆಸ್ಟ್ರೇಲಿಯಾದಲ್ಲಿ ಈಗ ಇಲಿಗಳ ಹಾವಳಿ ಹೆಚ್ಚಾಗಿದ್ದು, ಹೊಲ, ಮನೆ, ಕಚೇರಿ, ರೆಸ್ಟೋರೆಂಟ್‌ ಹೀಗೆ ಎಲ್ಲೆಲ್ಲೂ ಅಸಂಖ್ಯಾತ ಇಲಿಗಳು ಓಡಾಡುತ್ತಿದ್ದು ಅವುಗಳನ್ನು ನಿಯಂತ್ರಿಸುವುದು ಸ್ಥಳೀಯ ಆಡಳಿತಕ್ಕೆ ತಲೆ ನೋವಾಗಿದೆ.

ಸದ್ಯ ಆಸ್ಟ್ರೇಲಿಯಾದಲ್ಲಿ ಪ್ಲೇಗ್‌ನಂತರಹ ವಾತಾವರಣ ನಿರ್ಮಾಣವಾಗಿದ್ದು ಆಸ್ಟ್ರೇಲಿಯಾ ಸರ್ಕಾರ 5 ಸಾವಿರ ಲೀಟರ್‌ Bromadiolone ಎನ್ನುವ ಕಾರ್ಕೋಟಕ ವಿಷ ಕೊಡುವಂತೆ ಭಾರತದ ಬಳಿ ಬೇಡಿಕೆ ಇಟ್ಟಿದೆ. ವಿಶೇಷ ಎಂದರೆ ಈ ವಿಷವನ್ನು ಆಸ್ಟ್ರೇಲಿಯಾದಲ್ಲಿ ಈವರೆಗೆ ನಿಷೇಧಿಸಲಾಗಿತ್ತು.

ಆಸ್ಟ್ರೇಲಿಯಾದ ಕೃಷಿ ಸಚಿವ ಅಡಮ್‌ ಮಾರ್ಷಲ್‌, ಇಲಿಗಳ ಹಾವಳಿಯ ಬಗ್ಗೆ ಭವಿಷ್ಯ ನುಡಿದಿದ್ದು, ಮುಂದಿನ ತಿಂಗಳ ಹೊತ್ತಿಗೆ ಇಲಿಗಳ ಸಂಖ್ಯೆ ಕಡಿಮೆಯಾಗದಿದ್ದರೆ ಆಸ್ಟ್ರೇಲಿಯಾದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ನೆಲ ಕಚ್ಚಲಿದೆ ಎಂದು ತಿಳಿಸಿದ್ದಾರೆ.

ಕಳೆದ ಐದು ದಶಕಗಳಲ್ಲಿ ಆಸ್ಟ್ರೇಲಿಯಾ ಭೀಕರ ಬರ ಕಂಡಿತ್ತು. ಕೆಲವು ವರ್ಷಗಳಿಂದ ಈ ದೇಶದಲ್ಲಿ ಭರಪೂರ ಮಳೆಯಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದ ಕಾರಣ ಇಲ್ಲಿನ ರೈತರು ತಮ್ಮ ಬೆಳೆಗಳನ್ನು ಹತ್ತು ಪಟ್ಟು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಇಲಿಗಳು ಕಾಣಸಿಕೊಂಡಿದ್ದು, ಭರ್ತಿ ಆಹಾರ ಸಿಗುತ್ತಿರುವ ಕಾರಣ ಅವುಗಳ ಸಂತಾನೋತ್ಪತ್ತಿ ಕ್ರಿಯೆಯೂ ಅಷ್ಟೇ ವೇಗವಾಗಿ ನಡೆಯುತ್ತಿದೆ.

ಇಷ್ಟು ದಿನ ಮಳೆ ಇಲ್ಲದೆ ಬೆಳೆ ಬೆಳೆಯದ ರೈತರು ಖುಷಿಯಾಗಿ ಕೃಷಿ ಆರಂಭಿಸಿದ್ದರು, ಇಲಿಗಳ ಹಾವಳಿ ಹೆಚ್ಚಾಗಿರುವ ಕಾರಣ ಸ್ಥಳೀಯ ಆಡಳಿತ ಬೆಳೆಯನ್ನು ಕಡಿಮೆ ಬೆಳೆಯುವಂತೆ ರೈತರಿಗೆ ಸೂಚಿಸಿದೆ. ಆಸ್ಟ್ರೇಲಿಯಾದ ಪೂರ್ವ ರಾಜ್ಯಗಳಲ್ಲೂ ಇದೇ ರೀತಿ ಇಲಿಗಳ ಮಳೆಯಾಗುತ್ತಿದ್ದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

Exit mobile version