ಗಂಧದ ಗುಡಿಯೊಳಗೆ ‘ಅಪ್ಪು’ ; ಮರೆಯಲಾಗದ ಕಥೆಯನ್ನು ಕಡೆಯದಾಗಿ ಕೊಟ್ಟಿದ್ದಕ್ಕೆ ಕಣ್ಣೀರಿಟ್ಟ ಫ್ಯಾನ್ಸ್

Bengaluru : ‘ಅಭಿ’ಮಾನಿಗಳು ಪೂಜಿಸಿ, ಆರಾಧಿಸಿ, ರಾರಾಜಿಸೋ, ನೆಚ್ಚಿನ ‘ಪರಮಾತ್ಮ’, ಕನ್ನಡಿಗರ ಯುವರತ್ನ, ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಶ್ರೀ ಪುನೀತ್ ರಾಜಕುಮಾರ್ (Dr. Puneeth Rajkumar) ಅವರ ಕನಸಿನ ಕುಡಿ ‘ಗಂಧದ ಗುಡಿ’ (Review Of Appu Gandadagudi) ಇಂದು ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.

ಬಹಳ ಅಪರೂಪದ ‘ಬೆಟ್ಟದ ಹೂವು’ ರೂಪಿಸಿದ ಕನಸಿನ ಯೋಜನೆ `ಗಂಧದ ಗುಡಿ’ ಕಣ್ತುಂಬಿಕೊಂಡು (Review Of Appu Gandadagudi) ಧನ್ಯರಾದ ಅಭಿಮಾನಿಗಳ ಕಣ್ಣುಗಳು ಕೆಲ ಕಾಲ ನಿಸರ್ಗದೊಳಗೆ ಮಿಂಚಿ ಮರೆಯಾದವು…

ಕನ್ನಡ ಸಿನಿ ಲೋಕದಲ್ಲಿ ಹಲವಾರು ಬಗೆಯ ಚಿತ್ರಗಳು ನಾನಾ ಭಾಷೆಯ ಮುಖೇನ ಪರದೆಗೆ ಅಪ್ಪಳಿಸಿ, ಜನರ ಮನವನ್ನು ತಲುಪಿರುವುದಕ್ಕೆ ಅನೇಕ ನಿದರ್ಶನವಿದೆ.

ಈ ಸಾಲಿನಲ್ಲಿ ಕನ್ನಡ ಭಾಷೆಯ ಚಿತ್ರಗಳು ಪ್ರಮುಖವಾಗಿವೆ ಎಂಬುದಕ್ಕೆ ಇತ್ತೀಚಿನ ಸಿನಿಮಾಗಳು ಜ್ವಲಂತ ಸಾಕ್ಷಿ!

ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ಭಾಷೆಯ ಸೊಗಡು, ಮಣ್ಣಿನ ಕಥೆ, ದೈವಗಳ ಆರಾಧನೆ, ಭೂಗತ ಲೋಕ, ಪ್ರೇಮ-ಕಾವ್ಯಗಳಿಗೆ ಸಂಬಂಧಿಸಿದಂತ ಅದೆಷ್ಟೋ ಕಥಾಹಂದರಗಳು ಸಿನಿಮಾ ಮೂಲಕ ಜನರನ್ನು ಮನರಂಜಿಸಿ, ಭಾವಗಳನ್ನು ಅರ್ಥೈಸಿ, ಸಮಾಜದ ಪರಿಕಲ್ಪನೆಯನ್ನು ಕನ್ನಡಿಯಾಗಿ ಪರಿಚಯಿಸಿದೆ.

ಇದನ್ನೂ ಓದಿ : https://vijayatimes.com/kishore-requests-haters/

ಸದ್ಯ ಈ ಒಂದು ಪ್ರಯತ್ನದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ, ಅದ್ಭುತವಾಗಿ ಹೊರಹೊಮ್ಮಿದ್ದು, ಡಾ. ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಮಾತ್ರ. ಹೌದು, ಪ್ರಕೃತಿಯ ವಿಸ್ಮಯಗಳು,

ಅರಣ್ಯ ಸಂಪತ್ತು, ವನ್ಯಜೀವಿ ಸಂಕುಲಗಳ ಬಗ್ಗೆ ಮೂಡಿಬಂದಿರುವ ಲೆಕ್ಕವಿಲ್ಲದಷ್ಟು ಸಾಕ್ಷ್ಯಚಿತ್ರಗಳ ಮಧ್ಯೆ ತಮ್ಮ ಕನಸಿನ ಯೋಜನೆ ಗಂಧದ ಗುಡಿಯನ್ನು ಚಿತ್ರಿಸಿರುವ ಪರಿ, ಇಟ್ಟ ಹೆಜ್ಜೆ ನಿಜಕ್ಕೂ ಹಸಿರುಮಯವಾಗಿದೆ.

ತಂದೆ ಡಾ. ರಾಜ್‍ಕುಮಾರ್ (Dr. Rajkumar) ಅವರು ಅಂದು ಅಭಯಾರಣ್ಯ (Forest) ಕುರಿತು ಮಾಡಿದ ಗಂಧದ ಗುಡಿ (Gandada Gudi) ಚಿತ್ರದಿಂದ ಪ್ರೇರಣೆ ಪಡೆದು,

ಪ್ರಕೃತಿ ಬಗ್ಗೆ ವಿಶೇಷ ಕಾಳಜಿಯನ್ನು ಮೈಗೂಡಿಸಿಕೊಂಡು, ಇಂದು ಅದೇ ಶೀರ್ಷಿಕೆಯಡಿಯಲ್ಲಿ ಪ್ರಕೃತಿ ಸಂಪತ್ತು, ಜೀವರಾಶಿಗಳ ಬೀಡು,

ಅರಣ್ಯಗಳ ಮೌಲ್ಯತೆಯನ್ನು ತಮ್ಮ ಕಣ್ಣಿನಲ್ಲಿ ಕಂಡು, ಅನುಭವಿಸಿ ಅದನ್ನು ಇಡೀ ಜಗತ್ತಿಗೆ ಸಿನಿಮಾ ಮುಖೇನ ತೋರಿಸಿ, ಮಹತ್ತರ ಸಂದೇಶವನ್ನು ಸಾರಿದ್ದಾರೆ ಪ್ರೀತಿಯ ಅಪ್ಪು(Appu).

ಕರ್ನಾಟಕದ (Karnataka) ಅದ್ಬುತ ವನ್ಯಜೀವಿಗಳ ಛಾಯಗ್ರಾಹಕ (Wildlife Photographer), ಫಿಲಂ ಮೇಕರ್ ಅಮೋಘವರ್ಷ (Amoghavarsha) ಅವರೊಟ್ಟಿಗೆ ತಮ್ಮ ಕನಸನ್ನು ಸಂಯೋಜಿಸಿ, ಚಿತ್ರಿಸಿ,

ವೈಭವಿಕರಿಸಿರುವ ಗಂಧದ ಗುಡಿ ಸಿನಿಮಾವನ್ನು ಕಣ್ತುಂಬಿಕೊಂಡ ವನ್ಯಜೀವಿ ಪ್ರೇಮಿಗಳು, ಪರಿಸರ ಸಂರಕ್ಷಕರು, ಇವರೆಲ್ಲರನ್ನೂ ಮೀರಿದ ಅಪ್ಪು ಅವರ ಅಭಿಮಾನಿ ದೇವರುಗಳಿಗೆ,

ಪುನೀತ್ ರಾಜಕುಮಾರ್ ಅವರು ಚಿತ್ರದ ಮಧ್ಯೆ ಹಾಗೂ ಕಡೆಯದಾಗಿ ಕೊಟ್ಟ ಮಹತ್ತರ ಸಂದೇಶವೇನು? ಹಂಚಿಕೊಂಡ ವಿಷಯವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅರಣ್ಯ ಸಂಪತ್ತಿನೊಳಗೆ ನಿಶಬ್ದವಾಗಿ ಹೆಜ್ಜೆಯಿಡಲು ಪ್ರಾರಂಭಿಸಿ….

ಅಪ್ಪು-ಅಮೋಘ ಸಂಗಮ ಕರ್ನಾಟಕ ರಾಜ್ಯದ ಅಭಯಾರಣ್ಯದೊಳಗೆ ನಮ್ಮ ಕೈಹಿಡಿದು, ತಮ್ಮೊಡನೆ ಹೆಜ್ಜೆ ಹಾಕುವಂತೆ ಹೇಳಿತು… ದಟ್ಟ ಕಾನನಗಳ ನಡುವೆ ಜೀಪ್ ಸವಾರಿ ಎಷ್ಟು ಹಿತವೆನಿಸಿತೋ, ಹುಲಿ, ಆನೆಗಳ ಆಗಮನಕ್ಕೆ ಕಾದು ಕುಳಿತ್ತದ್ದು ಒಂದು ರೀತಿ ಹಿತವೆನಿಸಿತು.

ಅಪ್ಪು-ಅಮೋಘ ಅವರೊಡನೆ ಬೆಟ್ಟ-ಗುಡ್ಡ ಹತ್ತಿದ ನಾವು, ವನ್ಯ ಪ್ರದೇಶಗಳ ವಿಸ್ತಾರ ವಿಸ್ತರಿಸಿಕೊಂಡು ಹೋದೆವು.

ಪುನೀತ್ ಅವರು ಹುಟ್ಟಿದ ಊರು ಗಾಜನೂರು, ಹುಲಿಗಳ ನಾಡು ಎಂದೇ ಕರೆಯಲ್ಪಡುವ ಚಾಮರಾಜನಗರದಿಂದ (Chamarajnagar) ಅರಣ್ಯ ಸಂಪತ್ತು,

ಪ್ರಕೃತಿ ವಿಸ್ಮಯಗಳನ್ನು ಅನ್ವೇಷಿಸಲು ಪ್ರಾರಂಭಿಸಿ, ನಾಗರಹೊಳೆ, ಮುರುಡೇಶ್ವರ, ನೇತ್ರಾಣಿ, ಮಲೆನಾಡು, ಕಾಳಿಯ ಮೂಲಕ ಪ್ರಕೃತಿ ನಮಗೆ ಕೊಟ್ಟದೇನು?

ಇದನ್ನೂ ಓದಿ : https://vijayatimes.com/rajnikanth-likes-kantara/

ನಾವು ಮರು ನೀಡುತ್ತಿರುವುದೇನು? ಎಂಬುದರ ಬಗ್ಗೆ ಇಂಚಿಂಚಾಗಿ ಅಪ್ಪು ಅವರು ಇಲ್ಲಿ ನಮಗೆ ತಮ್ಮ ಮುದ್ದು ಮಾತುಗಳಿಂದ ಅರ್ಥೈಸಿದ್ದಾರೆ.

ಕಾಲುದಾರಿಯ ನಡಿಗೆ, ಚಿಟ್ಟೆಗಳ ಕಲರವ, ಮರದ ಎಲೆಗಳಲ್ಲಿರುವ ಸುವಾಸನೆ, ಜಲರಾಶಿಯೊಳಗೆ ಇರುವ ಆಗಾಧ ಜಲಚರ, ಹಳ್ಳಿ ಜನಗಳ ಜೀವನದ ಆಸರೆಯ ಮೂಲ, ವೈಲ್ಡ್ ಎಂಬ ಪದದ ಅರ್ಥ,

ಮಲೆನಾಡು ಭಾಗದಲ್ಲಿನ ಹಾವುಗಳಲ್ಲಿ ಇರುವ 70 ಪ್ರಭೇದಗಳು, ಹಸಿರಿನ ಗಿರಿ ಸಾಲುಗಳ ಮಧ್ಯೆ ನುಸುಳಿ, ಬಂಡೆ, ಕಲ್ಲುಗಳನ್ನು ಸರಿಸಿ,

ವಿಶಾಲವಾಗಿ ಹರಿದು ಬರುವ ಸ್ವಚ್ಚ ಜಲವನ್ನು ಕೈತುಂಬ ಹಿಡಿದು, ಕುಡಿದು, ನೀರಿನ ಮೌಲ್ಯವನ್ನು ತಿಳಿಸಿಕೊಡುವ ಶೈಲಿ ನಿಜಕ್ಕೂ ನಮ್ಮ ಆಲೋಚನೆಗಳನ್ನು ಮತ್ತಷ್ಟು ತಿಳಿಯಾಗಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಪುನೀತ್ ಅವರನ್ನು ನೋಡುವುದೇ ಒಂದು ಭಾಗ್ಯ ಎನ್ನುವ ನಮಗೆ, ಅಪ್ಪು ಅವರ ಮುಗ್ದತೆ, ಸರಳತೆ ಪ್ರಮುಖವಾಗಿ ಪ್ರತಿ ಹಂತದಲ್ಲೂ ಕಾಣಸಿಗುತ್ತದೆ ಹಾಗೂ ಅಪ್ಪು ಅವರು ಮಕ್ಕಳಂತೆ ಕೌತುಕದಿಂದ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುವುದು,

ತಮಗೆ ತಿಳಿದ ವಿಷಯವನ್ನು ವಿವರಿಸುವುದು, ಅಲ್ಲಲ್ಲಿ ಮಾತಿನ ಮೂಲಕ ಹಾಸ್ಯ ಸೃಷ್ಟಿಸಿದ ಪರಿ ನಿಜಕ್ಕೂ ಮನಸ್ಸಿಗೆ ಮುದ ನೀಡಿತು.

96 ನಿಮಿಷಗಳ ಈ ಸಾಕ್ಷ್ಯ ಚಿತ್ರದಲ್ಲಿ ಅಪ್ಪು ಅವರು ನಮಗೆಲ್ಲಾ ಒಂದು ಅನುಭವ, ಮಹತ್ತರ ಪಯಣದೊಂದಿಗೆ, ಮಹತ್ವದ ಸಂದೇಶ ನೀಡಿರುವುದನ್ನು ನೀವು ಖಂಡಿತ ತಿಳಿಯಬೇಕು ಹಾಗೂ ತಿಳಿದು ಅವರಂತೆ ಪಾಲಿಸಬೇಕು.

ಪ್ರಕೃತಿ ನಮಗೆ ಗಾಳಿ, ಮಳೆ, ಬೆಳಕು, ನೀರು, ಮರ-ಗಿಡ ಎಲ್ಲವನ್ನೂ ಉಚಿತವಾಗಿ ಕೊಟ್ಟಿದ್ದಕ್ಕೋ ಏನೋ,

ನಮ್ಮ ಮನುಷ್ಯರು ಅದನ್ನು ಗಂಭೀರವಾಗಿ ಪರಿಗಣಿಸದೇ, ಉಳಿಸಿ, ಬೆಳಸಿ, ಸಂರಕ್ಷಿಸುವ ಜವಾಬ್ದಾರಿಯನ್ನು ಮರೆತು ‘ಉಚಿತ’ವಾಗಿಯೇ ಸ್ವೀಕರಿಸಿ, ಜೀವಿಸುತ್ತಿರುವುದು ತೀವ್ರ ಬೇಸರದ ಸಂಗತಿಯಾಗಿದೆ.

ಕಡಲಿನ ಒಡಲಿನೊಳಗಿಳಿದು ಸಕಲ ಜೀವರಾಶಿಗಳನ್ನು ನೋಡಿ ತೃಪ್ತಿಪಟ್ಟರೇ, ಅತ್ತ ಸಮುದ್ರದೊಳಗೆ ಮಾನವ ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯ (Plastic Waste) ಅದೇ ಜೀವರಾಶಿಗಳಿಗೆ ಹೇಗೆ ಹಿಂಸೆ ನೀಡುತ್ತಿದೆ ಎಂಬುದು ಕಣ್ಣಿಗೆ ಬಡಿದು, ಮನದೊಳಗೆ ಪ್ರಶ್ನೆಯಾಗಿ ಕಾಡುವುದಂತೂ ಸತ್ಯ!

ಕಡಲನ್ನು ಅನ್ವೇಷಿಸಿ ಹೊರಬಂದ ಅಪ್ಪು ಅವರು ಒಬ್ಬ ಹೀರೋ ಆಗಿ ಒಂದು ಮುಖ್ಯವಾದ ಸಂದೇಶ ನೀಡುತ್ತಾರೆ, ಅದೇನು ಎಂಬುದನ್ನು ಅಭಿಮಾನಿಯಾಗಿ ನೀವೆ ನೋಡಿ ತಿಳಿಯಬೇಕು.

ಇದನ್ನೂ ಓದಿ : https://vijayatimes.com/kantara-copied-our-song/

ಒಟ್ಟಾರೆ ತಮ್ಮ ಕನಸಿನ ಲೋಕವನ್ನು ಪ್ರವೇಶಿಸಿದ ಪುನೀತ್ ಅವರು, ನಾ ಕಂಡ ಕನಸಿನ ಲೋಕವನ್ನು ಜಗತ್ತಿಗೆ ನನ್ನ ಕಣ್ಣಿನ ಮುಖೇನ ತೋರಿಸಬೇಕು ಎಂದು ಆಸೆಪಟ್ಟು, ಹೆಜ್ಜೆಯಿಟ್ಟ ಗಂಧದ ಗುಡಿ ಇದು.

ಗಂಧದ ಗುಡಿ ಮುಖೇನ ಅಪ್ಪು ಅವರು ನಮಗೆ ಕಟ್ಟಿಕೊಟ್ಟಂತ ಮರೆಯಲಾಗದ ಕಡೆಯ ಚಿನ್ನದಂತ ಕಥೆ ಇದು.

ಅಪ್ಪು ಎಂಬ ವ್ಯಕ್ತಿ, ಪ್ರೀತಿಯ ಅಪ್ಪುಗೆ ನೀಡಿ, ತೆರೆ ಮೇಲೆ ಮಾತ್ರ ನಾಯಕನಾಗದೆ, ನಿಜ ಜೀವನದಲ್ಲೂ ನಾಯಕನಾಗಿ ನಿಂತು ಮಾರ್ಗದರ್ಶನ ನೀಡಿ, ಇಂದು ‘ವಿಶ್ವ ಮಾನವ’ನಾಗಿ (Universal Human) ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಪ್ಪು ಅಜರಾಮರ….
Exit mobile version