ಈತ ತೊದಲು ಮಾತನಾಡ್ತಾನೆ ಕೆಲಸಕ್ಕೆ ಬೇಡ ಎಂದು ರಿಜಕ್ಟ್ ಆದ ವ್ಯಕ್ತಿ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್!

Mr Bean

ಮಿಸ್ಟರ್ ಬೀನ್(Mr. Bean) ಎಂದೇ ಖ್ಯಾತರಾದ ರೋವನ್ ಅಟ್ಕಿನ್ಸನ್(Rowan Atkinson) ಅವರ ಬಗ್ಗೆ ನಿಮಗೆ ತಿಳಿದಿರದ ಒಂದು ಸಂಗತಿ ಇಲ್ಲಿದೆ.

ಮಿಸ್ಟರ್ ಬೀನ್ ಎನ್ನುವ ಮುಗ್ದ ಮನಸ್ಸಿನ ವ್ಯಕ್ತಿ, ತನ್ನ ಮುಖಭಾವ, ಆಂಗಿಕ ಅಭಿನಯದಿಂದಲೇ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಾನೆ. ಅತಿ ಕಡಿಮೆ ಮಾತನಾಡುವ ಆತ ತನ್ನ ಅಮಾಯಕತೆಯಿಂದ ಸಮಸ್ಯೆಗಳಿಗೆ ಸಿಲುಕುತ್ತಲೇ ಇರುತ್ತಾನೆ. ‘ಮಿಸ್ಟರ್‌ ಬೀನ್’ ತನ್ನ ಪ್ರತಿ ಹಾವಭಾವ, ನೋಟದಿಂದ ಇಡೀ ಜಗತ್ತನ್ನೇ ನಗೆಗಡಲಲ್ಲಿ ತೇಲಿಸ್ತಾನೆ. ಆದರೆ ಬೀನ್‌ ಪಾತ್ರಧಾರಿ ರೋವನ್ ಅಟ್ಕಿನ್‌ಸನ್ ನಿಜ ಜೀವನದಲ್ಲಿ ಅಷ್ಟೇ ಗಂಭೀರ ಮನುಷ್ಯ. ಜೀವನ ಕಲಿಸಿರುವ ಪಾಠಗಳೇ ಅವರನ್ನು ಹೆಚ್ಚು ಗಂಭೀರವಾಗುವಂತೆ ಮಾಡಿವೆ.


ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ರೋವನ್ ಅಟ್ಕಿನ್‌ಸನ್‌ ಹೊಲದಲ್ಲಿ ಶ್ರಮಪಟ್ಟು ದುಡಿದು ಶಾಲೆಗೆ ಹೋದವರು. ಓದಿಗಿಂತ, ಶಾಲೆಯಲ್ಲಿ ಪ್ರತಿದಿನ ಸಂಜೆ ನಡೆಯುತ್ತಿದ್ದ ಲಘು ಸಾಂಸ್ಕೃತಿಕ ಕಾರ್ಯಕ್ರಮ ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತಂತೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿದಾಗ ಅವರ ಮುಂದಿದ್ದ ಎರಡು ಆಯ್ಕೆ ಎಂದರೆ, ಇಂಜಿನಿಯರ್ ಆಗುವುದು ಅಥವಾ ತನ್ನ ನೆಚ್ಚಿನ ನಟನಾ ವೃತ್ತಿ. ಅಟ್ಕಿನ್‌ಸನ್‌ ಅವರಿಗಿದ್ದ ಉಗ್ಗಿನ ತೊಂದರೆಯಿಂದಾಗಿ ಅವರಿಗೆ ನಟನೆಗೆ ಅವಕಾಶ ಕೊಡಲು ಹಲವರು ನಿರಾಕರಿಸಿದ್ದರು. ಕೇವಲ ನಟನೆಗಾಗಿ ಸಿಕ್ಕ ಒಳ್ಳೆಯ ಉದ್ಯೋಗದ ಅವಕಾಶವನ್ನು ಬಿಟ್ಟಾಗ ಕುಟುಂಬ ಸದಸ್ಯರು ಸಿಟ್ಟಾಗಿದ್ದರಂತೆ. ಆದರೆ ಅವರ ಸಾಧನೆ ಮನೆಯವರ ಸಿಟ್ಟನ್ನು ಬಹುಬೇಗನೆ ತಣ್ಣಗಾಗಿಸಿತು.

ಓದು ಮುಗಿದ ಕೂಡಲೇ ವೃತ್ತಿರಂಗಭೂಮಿಗೆ ಜಿಗಿದರು ಅಟ್ಕಿನ್‌ಸನ್‌. ಅವರ ಮೊದಲ ಪ್ರದರ್ಶನ ‘ಬಿಯಾಂಡ್ ಎ ಜೋಕ್’ ಬಹಳ ಜನಪ್ರಿಯತೆ ತಂದು ಕೊಟ್ಟಿತು. ‘ಮಾತಿಲ್ಲದ ಮೂಕ ನಾಟಕ ಯಾರು ನೋಡುತ್ತಾರೆ’ ಎಂದು ಜರಿದು ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ತಕರಾರು ಮಾಡಿದ್ದ ಥಿಯೇಟರ್ ಒಡೆಯರು ನಂತರ ಅಟ್ಕಿನ್‌ಸನ್‌ ಮುಂದೆ ಸಾಲುಗಟ್ಟಿ ನಿಂತಿದ್ದರು. ಮೊದಲ ಪ್ರದರ್ಶನ ಹಿಟ್ ಆಗಿದ್ದೇ ತಡ ಅಟ್ಕಿನ್‌ಸನ್‌ಗೆ ಬಿಬಿಸಿ ರೇಡಿಯೊ ತನ್ನ ಬಾಗಿಲು ತೆರೆಯಿತು. ಸಮಾಜದ ಉನ್ನತ ವ್ಯಕ್ತಿಗಳ ಧ್ವನಿ ಅನುಕರಣೆ ಮಾಡಿ ತಾನೇ ಪ್ರಶ್ನೆ ಕೇಳಿ ತಾನೇ ಉತ್ತರ ನೀಡುತ್ತಿದ್ದ ಈ ಟಾಕ್ ಷೋ ಅಟ್ಕಿನ್‌ಸನ್‌ ಅವರನ್ನು ಅಮೆರಿಕದಲ್ಲಿ ಮನೆ ಮಾತಾಗಿಸಿತು.

ಆದರೆ ಅಟ್ಕಿನ್‌ಸನ್‌ಗೆ ತನ್ನ ಗುರಿ ಅಭಿನಯ ಎಂಬುದು ಸ್ಪಷ್ಟವಿತ್ತು. ಹಾಗಾಗಿ ರೇಡಿಯೊಗೆ ವಿದಾಯ ಹೇಳಿ, ಟಿವಿ ಅಂಗಳದತ್ತ ಮುಖ ಮಾಡಿದರು. ಟಿವಿ ಧಾರಾವಾಹಿ ಮಾಡುತ್ತಿದ್ದಾಗಲೇ ವ್ಯಂಗ್ಯ ಚಿತ್ರವೊಂದಕ್ಕೆ ಪೋಸು ಕೊಡಲೆಂದು ಕನ್ನಡಿ ಮುಂದೆ ನಿಂತು ವಿಭಿನ್ನ ಮುಖಭಾವ ಪ್ರದರ್ಶಿಸುತ್ತಿದ್ದಾಗ ಆಟ್ಕಿನ್‌ಸನ್‌ಗೆ ‘ಮಿಸ್ಟರ್ ಬೀನ್’ ಕಲ್ಪನೆ ಹೊಳೆದದ್ದು. ನಂತರ ಅದು ತೆರೆಯ ಮೇಲೆ ಬಂತು. ಜಗತ್ತಿನೆಲ್ಲೆಡೆ ಮನ್ನಣೆ ಗಳಿಸಿದ್ದು ಈಗ ಇತಿಹಾಸ. ‘ಮಿಸ್ಟರ್ ಬೀನ್’ ಪಾತ್ರ ಜನಪ್ರಿಯವಾಗಲು, ಆಗ ನನ್ನನ್ನು ನಂಬಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರೂ ಕಾರಣರು’ ಎಂಬುದು ಅಟ್ಕಿನ್‌ಸನ್‌ ಅವರ ವಿನಮ್ರ ನುಡಿ.


ಆದರೆ ನಿಜ ಜೀವನದಲ್ಲಿ ಬೀನ್ ಪಾತ್ರಧಾರಿ ಅಟ್ಕಿನ್‌ಸನ್‌ ಅವರದು ಬಹಳ ಸಂಕೋಚದ ವ್ಯಕ್ತಿತ್ವ. ಸಂದರ್ಶನಗಳಿಂದ ಅವರು ಸದಾ ದೂರ. ಇದಕ್ಕೆ ಮುಖ್ಯ ಕಾರಣವೆಂದರೆ ಅವರಿಗಿರುವ ಉಗ್ಗು ಸಮಸ್ಯೆ. ಇದರಿಂದಾಗಿ ಅವರಿಗೆ ನಿರರ್ಗಳವಾಗಿ ಮಾತನಾಡಲು ಆಗುವುದಿಲ್ಲ. ಅದರಲ್ಲಿಯೂ ‘ಬಿ’ ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಉಚ್ಚರಿಸಲು ಹೆಚ್ಚು ಕಷ್ಟಪಡುತ್ತಾರೆ. ಹಾಗಾಗಿ ಅವರು ಸಂದರ್ಶನಗಳು ಸಭೆಗಳಿಂದ ದೂರವಿರುತ್ತಾರೆ.

ನಮ್ಮ ಚಿಕ್ಕ ಚಿಕ್ಕ ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮ ಕೈಯಲ್ಲಿ ಏನು ಆಗುವುದಿಲ್ಲ ಎಂದು ನಿರಾಶರಾಗುವವರಿಗೆ ಅಟ್ಕಿನ್ಸನ್ ಅವರ ಬದುಕು ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದೆ.

Exit mobile version