ಸುರಕ್ಷತಾ ಮಾರ್ಗಸೂಚಿ ತಪ್ಪದೇ ಪಾಲಿಸಿ, ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ: ಬಿಎಸ್​ವೈ

ಬೆಂಗಳೂರು, ಮಾ. 19: ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ ಸೋಂಕು ಹರಡುವುದನ್ನು ತಡೆಯಲು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ ಎಂದು ರಾಜ್ಯದ ಜನರನ್ನು ಮನವಿ ಮಾಡಿದರು.

ಈ ಸಂಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ, ಕೋವಿಡ್​-19 ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ ಮತ್ತೆ ತೀವ್ರವಾಗುತ್ತಿದೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ನಾಗರಿಕರ ಸಹಕಾರವಿಲ್ಲದೆ ಇದು ಯಶಸ್ವಿಯಾಗದು. ಮಾಸ್ಕ್ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಜೀವನ ಕ್ರಮವಾಗಲಿ. ಈ ಮುನ್ನೆಚ್ಚರಿಕೆಯ ಕ್ರಮಗಳ ನಿರ್ಲಕ್ಷ್ಯ ಸರ್ವಥಾಸಲ್ಲದು.

ಹಿರಿಯ ನಾಗರಿಕರು, ಇತರ ಆರೋಗ್ಯ ಸಮಸ್ಯೆಯುಳ್ಳ 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ತಪ್ಪದೇ ಲಸಿಕೆ ಪಡೆದುಕೊಂಡು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಆದರೆ ಮುನ್ನೆಚ್ಚರಿಕೆಯ ಕ್ರಮಗಳ ಪಾಲನೆ ನಿರಂತರವಾಗಿ ಮುಂದುವರಿಯಲಿ. ಸಾರ್ವಜನಿಕ ಸ್ಥಳಗಳಲ್ಲಿ ಈ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ, ಕೋವಿಡ್-19 ನಿಯಂತ್ರಿಸೋಣ ಎಂದು ಮನವಿ ಮಾಡಿದ್ದಾರೆ.

ಆ ಮೂಲಕ ಜೀವ, ಜೀವನೋಪಾಯಗಳ ಸಮತೋಲನ ಕಾಪಾಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸೋಣ, ಮುನ್ನೆಚ್ಚರಿಕೆಯೊಂದಿಗೆ ಮುನ್ನಡೆಯೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

Exit mobile version