ಮಹಿಳಾ ಅಥ್ಲೀಟ್‌ಗಳೊಂದಿಗೆ ನಿಲ್ಲುತ್ತೇವೆ, ಸಾಕ್ಷಿ ನಿವೃತ್ತಿಯಿಂದ ಕ್ರೀಡಾ ಉದ್ಯಮ ಅಸಮಾಧಾನ: ವಿಜೇಂದರ್ ಸಿಂಗ್

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥರಾಗಿ (Indian Wrestling Federation) ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾಗಿದ್ದರಿಂದ ಮನನೊಂದು ಒಲಂಪಿಕ್ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲ್ಲಿಕ್ (Sakshi Malik) ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅಥ್ಲೀಟ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್ (Vijender Singh) ‘ನಾವು ಮಹಿಳಾ ಅಥ್ಲೀಟ್‌ಗಳ ಜತೆ ನಿಲ್ಲುತ್ತೇವೆ. ಸಾಕ್ಷಿ ಮಲ್ಲಿಕ್ ನಿವೃತ್ತಿ ನಿರ್ಧಾರದಿಂದ ಕ್ರೀಡಾ ಉದ್ಯಮ ಅಸಮಾಧಾನಗೊಂಡಿದೆ’ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ(Olympics) ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕುಸ್ತಿಪಟು ಸಾಕ್ಷಿ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ. ‘ಕ್ರೀಡಾ ಉದ್ಯಮವು ಕುಸ್ತಿಪಟು ಸಾಕ್ಷಿ ಮಲಿಕ್ ಅವರ ನಿವೃತ್ತಿಯಿಂದ ಅಸಮಾಧಾನಗೊಂಡಿದೆ.

ನಾವು ಪ್ರತಿ ಆಟಗಾರ, ಪ್ರತಿ ಕ್ರೀಡಾಂಗಣ ಮತ್ತು ಪ್ರತಿ ‘ಅಖಾಡಾ’ಕ್ಕೆ ಹೋಗಿ ಅಥ್ಲೀಟ್‌ಗಳೊಂದಿಗೆ ಮಾತನಾಡುತ್ತೇವೆ. ಮಹಿಳಾ ಅಥ್ಲೀಟ್‌ (Female Athlete) ಗಳ ಉದ್ಯೋಗ, ಸುರಕ್ಷತೆಗಾಗಿ ನಾವು ಅವರೊಂದಿಗೆ ನಿಲ್ಲುತ್ತೇವೆ’ ಎಂದು ಹೇಳಿದ್ದು, ‘ಒಬ್ಬ ಮಹಿಳಾ ಆಟಗಾರ್ತಿಯಾಗಿ ಸಾಕ್ಷಿ ಮಲಿಕ್ ಅವರು ಕುಸ್ತಿ ತೊರೆಯುವ ನಿರ್ಧಾರ ಮಾಡುವಾಗ ಅವರಿಗಾಗಿರುವ ವೇದನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.

ಲೈಂಗಿಕ ಕಿರುಕುಳ (Sexual harassment) ಪ್ರಕರಣದಲ್ಲಿ ಸರ್ಕಾರದಿಂದ ನ್ಯಾಯ ಸಿಗಲಿಲ್ಲ. ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಕ್ರೀಡಾಪಟುಗಳಿಗೆ ಹೀಗಾದರೆ, ಇನ್ನು ಜನ ಸಾಮಾನ್ಯರ ಗತಿಯೇನು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಅಥ್ಲೀಟ್ ಆಗಿರುವ ನನಗೆ ಆಕೆಯ ನೋವು ಅರ್ಥವಾಗುತ್ತದೆ. ಕುಸ್ತಿಯಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಆಟಗಾರ್ತಿ ನ್ಯಾಯಕ್ಕಾಗಿ ಬೇಡಿಕೆಯಿಟ್ಟಳು.

ಆದರೆ, ಆಕೆಗೆ ನ್ಯಾಯ ಸಿಗಲಿಲ್ಲ. ಇದರಿಂದ ನೊಂದು ನಿವೃತ್ತಿ (Retirement) ಘೋಷಿಸಿದ್ದಾರೆ. ಇದರಿಂದ ಇಡೀ ವಿಶ್ವದಲ್ಲಿ ಭಾರತದ ಇಮೇಜ್ ಹೆಚ್ಚಾಗುತ್ತದೋ ಅಥವಾ ಕಡಿಮೆಯಾಗುತ್ತದೆಯೋ’ ಎಂದು ಪ್ರಶ್ನಿಸಿದರು. ‘ಸಾಕ್ಷಿ ನಿರ್ಧಾರಿಂದ ಇಡೀ ಕ್ರೀಡಾ ಉದ್ಯಮ ನಿರಾಶೆಗೊಂಡಿದೆ. ಹರಿಯಾಣದಲ್ಲಿ ಹುಡುಗರು ಮತ್ತು ಹುಡುಗಿಯರ ನಡುವೆ ತಾರತಮ್ಯವಿದೆ. ಈ ಬೆಳವಣಿಗೆ ನಂತರ ನಂತರ, ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಕ್ರೀಡಾಂಗಣಕ್ಕೆ ಕಳುಹಿಸುತ್ತಾರೆಯೇ’ ಎಂದರು.

ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ನೀಡದಿದ್ದರೆ ನಾವಾದರು ಅದನ್ನು ಹೇಗೆ ಪಡೆಯುತ್ತೇವೆ ಎಂದು ಹೆಣ್ಣುಮಕ್ಕಳ ಪೋಷಕರು ಚಿಂತಿಸುತ್ತಾರೆ? ಪ್ರಧಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಎಲ್ಲರೂ ಬಂದು ಇದು ಹೇಗಾಯಿತು ಎಂದು ಉತ್ತರಿಸಬೇಕು. ಈ ಫಲಿತಾಂಶ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದರು.

ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಾಕ್ಷಿ ಮಲಿಕ್, ‘ಕುಸ್ತಿ ಸಂಸ್ಥೆಗೆ ಮಹಿಳಾ ಮುಖ್ಯಸ್ಥರು ಆಯ್ಕೆಯಾಗಬೇಕು ಎಂದು ನಾವು ಬಯಸಿದ್ದೆವೆ. ಆದರೆ, ಅದು ಸಾಧ್ಯವಾಗಲಿಲ್ಲ. ನಾವು ಹೋರಾಡಿದೆವು; ಆದರೆ ಹೊಸ ಅಧ್ಯಕ್ಷರು ಬ್ರಿಜ್ ಭೂಷಣ್ (Brij Bhushan) ಅವರ ಸಹಾಯಕ. ಅವರ ವ್ಯಾಪಾರದಲ್ಲಿ ಪಾಲುದಾರರಾಗಿದ್ದಾರೆ. ನಾನು ಕುಸ್ತಿಯನ್ನು ತ್ಯಜಿಸುತ್ತೇನೆ’ ಎಂದು ಹೇಳಿದ ಅವರು, ತನ್ನ ಬೂಟುಗಳನ್ನು (Shoe) ಕಳಚಿ ಮೇಜಿನ ಮೇಲಿಟ್ಟು ನಿವೃತ್ತಿ ಘೋಷಿಸಿದರು.

ಭವ್ಯಶ್ರೀ ಆರ್ ಜೆ

Exit mobile version