New Delhi : ಸನಾತನ ಧರ್ಮದ ಕುರಿತು ಅವಹೇಳನಾತ್ಮಕವಾಗಿ ಹೇಳಿಕೆ ನೀಡಿರುವ ತಮಿಳುನಾಡು ಸರ್ಕಾರದ ಸಚಿವರಾದ ಉದಯನಿಧಿ ಸ್ಟಾಲಿನ್(Udayanidhi Stalin), ಎ ರಾಜಾ ಮತ್ತು ಇತರ 12 ಮಂದಿಗೆ ಸುಪ್ರೀಂ ಕೋರ್ಟ್ ನೋಟಿಸ್ (Notice) ಜಾರಿ ಮಾಡಿದೆ.
“ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ರೀತಿಯ ರೋಗವಾಗಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಬೇಕಿದೆ ಎಂದು ಕಾರ್ಯಕ್ರಮವೊಂದರಲ್ಲಿ ಅವಹೇಳನಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ರಾಜ್ಯ ಸಚಿವ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಉದಯನಿಧಿ ಸ್ಟಾಲಿನ್ ವಿರುದ್ದ ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಒಟ್ಟು 14 ಕಕ್ಷಿದಾರರನ್ನು ಸೇರಿಸಲಾಗಿದೆ. ಇವುಗಳಲ್ಲಿ ತಮಿಳುನಾಡು ಸರ್ಕಾರದ ವಿವಿಧ ಇಲಾಖೆಗಳು, ಡಿಜಿಪಿ, ಪೊಲೀಸ್ ಕಮಿಷನರ್, ಸಿಬಿಐ ಮತ್ತು ಇತರರು ಸೇರಿದ್ದಾರೆ. ಹೀಗಾಗಿ ಈ ಎಲ್ಲರಿಗೂ ಸುಪ್ರೀಂಕೋರ್ಟ್ ನೊಟೀಸ್ ನೀಡಿದೆ. ಆದಾಗ್ಯೂ, ಇದನ್ನು ದ್ವೇಷ ಭಾಷಣ ಪ್ರಕರಣದೊಂದಿಗೆ ಜೋಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ (September) 2 ರಂದು ಸನಾತನ ಧರ್ಮವನ್ನು “ಡೆಂಗ್ಯೂ” ಮತ್ತು “ಮಲೇರಿಯಾ” ಕ್ಕೆ ಹೋಲಿಸಿದ ನಂತರ ದೇಶಾದ್ಯಂತ ತೀವ್ರ ವಿವಾದ ಉಂಟಾಗಿತ್ತು. ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು. ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ” ಎಂದು ಆಡಳಿತಾರೂಢ ಡಿಎಂಕೆ (DMK) ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ಹೇಳಿಕೆಯ ವಿರುದ್ದ ದೇಶದ ಅನೇಕ ಕಡೆ ಪ್ರತಿಭಟನೆಗಳು ನಡೆದಿದ್ದು, ಭಾರೀ ವಿವಾದ ಸೃಷ್ಟಿಯಾಗಿತ್ತು.