ಪ್ರೇಯಸಿ ಜೊತೆ ರಹಸ್ಯ ಮದುವೆ: 3ನೇ ವಿವಾಹವಾದ ಬ್ರಿಟನ್‌ ಪ್ರಧಾನಿ ಜಾನ್ಸನ್

ಲಂಡನ್, ಮೇ. 31: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್‌ ಅವರನ್ನು ವೆಸ್ಟ್‌ಮಿನಿಸ್ಟರ್‌ ಕ್ಯಾಥಡ್ರಲ್‌ನಲ್ಲಿ ನಡೆದ ರಹಸ್ಯ ಕಾರ್ಯಕ್ರಮವೊಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಜಾನ್ಸನ್‌ಗೆ ಇದು ಮೂರನೇ ವಿವಾಹವಾಗಿದೆ. ರಹಸ್ಯವಾಗಿ ವಿವಾಹವಾದ ಜಾನ್ಸನ್‌ ಅವರು ಕೊನೆ ಕ್ಷಣದಲ್ಲಿ ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಮದುವೆ ಸಮಾರಂಭದಲ್ಲಿ ಕೇವಲ 30 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ ಎಂದು ಸನ್‌ ಮತ್ತು ಮೇಲ್‌ ಆನ್‌ ಸಂಡೇ ಪತ್ರಿಕೆಗಳು ವರದಿ ಮಾಡಿವೆ.

ಬೋರಿಸ್‌ ಜಾನ್ಸನ್‌ ಎರಡನೇ ಪತ್ನಿ ಮರೀನಾ ವೀಲರ್ ಜತೆ ವಿವಾಹ ವಿಚ್ಚೇದನ ಪಡೆದ ಬಳಿಕ, ಸೈಮನ್ಸ್ (33) ಜೊತೆ 2019ರಿಂದ ಡೌನಿಂಗ್ ಸ್ಟ್ರೀಟ್‌ನಲ್ಲಿ ಸಹಜೀವನ ನಡೆಸುತ್ತಿದ್ದರು. ಕಳೆದ ವರ್ಷ ಅವರಿಬ್ಬರೂ ನಿಶ್ಚಿತಾರ್ಥದ ಕುರಿತು ಘೋಷಿಸಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.

ಜಾನ್ಸನ್‌ಗೆ ಕೋವಿಡ್-19 ಸೋಂಕು ತಗುಲಿ ಗುಣಮುಖರಾದ ಬಳಿಕ ಸೈಮನ್ಸ್ ಅವರು ಏಪ್ರಿಲ್ 2020ರಲ್ಲಿ ಪುತ್ರ ವಿಲ್ಫ್ರೆಡ್ ಲಾರಿ ನಿಕೊಲಾಸ್ ಜಾನ್ಸನ್‌ಗೆ ಜನ್ಮ ನೀಡಿದ್ದರು.

Exit mobile version