ಸಿರಂ ಸಂಸ್ಥೆ ಸಿಇಒ ಪೂನಾವಾಲ್‌ ಭದ್ರತೆ ಕುರಿತು ಮರು ಚಿಂತನೆ ನಡೆಸಿ: ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ನ್ಯಾಯಾಲಯ ಸೂಚನೆ

ಮುಂಬೈ, ಜೂ. 01: ಕೋವಿಶೀಲ್ಡ್‌ ಲಸಿಕೆ ತಯಾರಿಸುತ್ತಿರುವ ಸಿರಂ ಸಂಸ್ಥೆಯ ಸಿಇಒ ಆಧಾರ್‌ ಪೂನಾವಾಲ್‌ ಅವರಿಗೆ ಭದ್ರತೆ ನೀಡುವ ಕುರಿತು ಮರು ಚಿಂತನೆ ನಡೆಸುವಂತೆ ಬಾಂಬೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪೂನಾವಾಲಾಗೆ ಝಡ್‌ ಪ್ಲಸ್‌ ಭದ್ರತೆ ನೀಡುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಯಿತು. ಈ ವೇಳೆ ಪೂನಾವಾಲ ಅವರಿಗೆ ಪ್ರಸ್ತುತ ವೈ ಕೆಟಗರಿ ಭದ್ರತೆ ನೀಡುತ್ತಿರುವುದಾಗಿ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಪೂನಾವಾಲಾ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು ಅವರ ಭದ್ರತೆಗೆ ಎಲ್ಲ ರೀತಿ ಕ್ರಮ ವಹಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತು. ಜೊತೆಗೆ ಮಹಾರಾಷ್ಟ್ರ ಆಧುನಿಕ ರಾಜ್ಯ, ಮುಂಬೈ ದೇಶದ ವಾಣಿಜ್ಯ ರಾಜಧಾನಿ ಎನ್ನುವ ಮೂಲಕ ಉದ್ಯಮಿಗೆ ರಕ್ಷಣೆ ನೀಡಬೇಕಾದ ಅಗತ್ಯತೆ ಬಗ್ಗೆ ಸಹ ನ್ಯಾಯಪೀಠ ಪರೋಕ್ಷವಾಗಿ ಪ್ರಸ್ತಾಪಿಸಿತು ಎನ್ನಲಾಗಿದೆ.

ಅಲ್ಲದೇ, ಪೂನಾವಾಲಾ ಭದ್ರತೆ ಬಗ್ಗೆ ಮರುಯೋಚಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿ ಹೇಳಿದ ನ್ಯಾಯಾಲಯ. ಗೃಹ ಇಲಾಖೆ ಉನ್ನತ ಸ್ಥಾನದಲ್ಲಿರುವವರು ಜೊತೆಗೆ ಮಾತನಾಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಈ ಮನವಿಯನ್ನು ಪ್ರತಿರೋಧಿ ಅರ್ಜಿ ಎಂದು ಪರಿಗಣಿಸದಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ತಿಳಿಸಿದೆ.

Exit mobile version