ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ : ಶರದ್ ಪವಾರ್!

sharad pawar

ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗಳನ್ನು ಪ್ರದರ್ಶನ ಮಾಡುವ ಅಗತ್ಯವಿಲ್ಲ. ಧಾರ್ಮಿಕ ಆಚರಣೆಗಳು ಮತ್ತು ಭಾವನೆಗಳು ನಮ್ಮ ಮನೆಗೆ ಸೀಮಿತವಾಗಿದ್ದರೆ ಉತ್ತಮ ಎಂದು ಹೇಳುವ ಮೂಲಕ ಎನ್‍ಸಿಪಿ(NCP) ನಾಯಕ ಶರದ್ ಪವಾರ್(Sharad Pawar) ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮದ ಬಗ್ಗೆ ಗೌರವ ಹೊಂದಿರುತ್ತಾರೆ. ಹಾಗೆಂದ ಮಾತ್ರ ಆತ ತನ್ನ ಧಾರ್ಮಿಕ ಭಾವನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಸರಿಯಲ್ಲ. ನಮ್ಮ ಧಾರ್ಮಿಕ ಭಾವನೆಗಳು ನಮ್ಮ ಮನೆಯೊಳಗೆ ಪ್ರದರ್ಶನವಾಗಬೇಕು. ಆದರೆ ಕೆಲವರು ಅಧಿಕಾರ ಕಳೆದುಕೊಂಡು ಹತಾಶೆಯಾಗಿದ್ದಾರೆ, ಹೀಗಾಗಿ ಈ ರೀತಿಯ ವಿವಾದಗಳನ್ನು ಸೃಷ್ಟಿಸುವ ಮೂಲಕ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಯ ಕುರಿತು ವ್ಯಂಗ್ಯವಾಡಿದರು.

ಇನ್ನು ಸಮುದಾಯಗಳ ನಡುವೆ ದ್ವೇಷ ಹರಡುವುದು ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ರೀತಿಯ ಪ್ರಯತ್ನಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತವೆ. ಹೀಗಾಗಿ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕು. ಅಧಿಕಾರಕ್ಕಾಗಿ ಸಮಾಜ ಒಡೆಯುವ ಪ್ರಯತ್ನಗಳನ್ನು ನಡೆಸುವುದು ದ್ರೋಹವಾಗುತ್ತದೆ. ಇನ್ನು ಈ ಹಿಂದೆ ಎಂದೂ ಈ ರೀತಿಯ ಪರಿಸ್ಥಿತಿಗಳನ್ನು ಮಹಾರಾಷ್ಟ್ರ ಅನುಭವಿಸಿರಲಿಲ್ಲ. ಆದರೆ ಇಂದು ಈ ರೀತಿಯ ವಿವಾದಗಳು ಹೆಚ್ಚುತ್ತಿರುವುದು ನನಗೆ ಆಶ್ಚರ್ಯ ಹುಟ್ಟಿಸಿದೆ.

ಇನ್ನು ಯಾರಾದರೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಬಯಸಿದರೆ ಅವರು ಅದನ್ನು ತಮ್ಮ ಮನೆಯಲ್ಲಿ ನಡೆಸಬೇಕು. ಅದನ್ನು ಬಿಟ್ಟು, ನನ್ನ ಮನೆಯ ಮುಂದೆ ನಿಮ್ಮ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲು ನೀವು ಬಯಸಿದರೆ, ನನ್ನನ್ನು ನಂಬಿರುವವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ, ಅವರು ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಈ ರೀತಿಯ ವಾತಾವರಣವನ್ನು ಸೃಷ್ಟಿಸಬಾರದು ಎಂದು ಪರೋಕ್ಷವಾಗಿ ಉದ್ದವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸ್ ಪಠಿಸುತ್ತೇವೆ ಎಂದಿದ್ದ ರಾಣಾ ದಂಪತಿಗಳಿಗೆ ಟಾಂಗ್ ನೀಡಿದರು.

Exit mobile version