ರ್ಯಾಪರ್ಗಳು ತಮ್ಮ ವಿಭಿನ್ನ ಜೀವನ ಶೈಲಿಯಿಂದ ಅಭಿಮಾನಿಗಳನ್ನ ಸೆಳೆಯೋಕೆ ಪ್ರಯತ್ನ ಪಡುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ನಿಜ! ಕೇವಲ ತಮ್ಮ ಹಾಡು, ನೃತ್ಯದಿಂದ ಮಾತ್ರವಲ್ಲದೇ ಯಾವುದಾದ್ರೂ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳೋ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸೋಕೆ ಯತ್ನಿಸೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ರ್ಯಾಪರ್ ಅದೆಂಥ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಗೊತ್ತಾ?

ಡಾನ್ ಸುರ್ ಎಂಬ 23 ವರ್ಷದ ರ್ಯಾಪರ್ ತನ್ನ ನೈಸರ್ಗಿಕ ಕೂದಲನ್ನು ಚಿನ್ನದ ಚೈನ್ ಗಳಿಂದ ಬದಲಾಯಿಸಿ ಅದನ್ನು ನೆತ್ತಿಯ ಮೇಲೆ ಅಳವಡಿಸಿಕೊಂಡಿದ್ದಾರೆ. ಸುರ್ ತನ್ನ ಇನ್ಸ್ಟಾಗ್ರಾಮ್ ಮತ್ತು ಕಳೆದುಹೋದ ಟಿಕ್ಟಾಕ್ ಪೇಜ್ ಗಳಲ್ಲಿ ತನ್ನ ಈ ಹೊಸ ಲುಕ್ ನ ಫೋಟೋಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬೇರೆಯವರು ಕೂದಲನ್ನು ಕಲರ್ ಮಾಡೋದು ನೋಡಿದ ಈ ಮೆಕ್ಸಿಕನ್ ರ್ಯಾಪರ್, ತಾನೂ ಅವರಂತೆ ಸಾಮಾನ್ಯ ರೀತಿಯಲ್ಲಿ ಕಾಣಿಸೋದು ಇಷ್ಟ ಇರಲಿಲ್ಲ.

ಹೀಗಾಗಿ ಏನಾದ್ರೂ ವಿಭಿನ್ನವಾಗಿ ಮಾಡ್ಬೇಕು ಅಂತ ಆಲೋಚಿಸಿ ಈ ರೀತಿ ಚಿನ್ನದ ಚೈನ್ ಗಳನ್ನು ನೆತ್ತಿಗೆ ಕೂದಲುಗಳ ರೀತಿ ಅಳವಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಈ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡ ಮೊದಲ ರ್ಯಾಪರ್ ತಾನು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಚಿನ್ನದ ಚೈನ್ ಗಳ ಜೊತೆಯಲ್ಲಿ, ಈತ ಹಲ್ಲುಗಳ ಮೇಲೆ ಚಿನ್ನದ ಬ್ರೇಸ್ ಕೂಡ ಹಾಕಿಸಿಕೊಂಡಿದ್ದಾರೆ. ಅವರು ಶೇರ್ ಮಾಡಿಕೊಂಡಿರೋ ಒಂದು ಟಿಕ್ಟಾಕ್ ವಿಡಿಯೋದಲ್ಲಿ ಇವರು ಆ ಹಲ್ಲುಗಳನ್ನು ಟೂತ್ಪೇಸ್ಟ್ನಿಂದ ಸ್ವಚ್ಛಗೊಳಿಸುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಈಗ ಈ ಚಿನ್ನದ ಕೂದಲಿನ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳು ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ನಲ್ಲಿ ವೈರಲ್ ಆಗಿವೆ. ಈ ಹೊಸ ಲುಕ್ ನ್ನು ಜನರು ಅಚ್ಚರಿಯಿಂದ ನೋಡ್ತಿದ್ದಾರೆ ಎಂಬುದೇ ಒಂದು ಸಂಗತಿಯಾಗಿ ಉಳಿದಿದೆ!
- ಪವಿತ್ರ ಸಚಿನ್