ಪಂಜಾಬ್‍ನಲ್ಲಿ ‘ಸಿಧು’ ಕರ್ನಾಟಕದಲ್ಲಿ ‘ಸಿದ್ದು’ : ಭರ್ಜರಿ ಟ್ರೋಲ್!

troll

ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಪರಿಣಾಮ ಟ್ರೋಲ್ ಹಾವಳಿಯೂ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡುವಂತ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು, ಹೀನಾಯವಾಗಿ ಸೋಲಲು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾರಣ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಸಿಧು ತಂದಿಟ್ಟ ಒಳಜಗಳಿಂದಲೇ ಕಾಂಗ್ರೆಸ್ ಹಾಳಾಗಿದೆ.

ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಲು ನವಜೋತ್ ಸಿಂಗ್ ಸಿಧು ಕಾರಣ ಎನ್ನಲಾಗುತ್ತಿದೆ. ಇದನ್ನೇ ಇಟ್ಟುಕೊಂಡು ಇದೀಗ ಕರ್ನಾಟಕದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಟ್ರೋಲ್ ಮಾಡಲಾಗುತ್ತಿದೆ. “ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯ ಸ್ಥಿತಿಗೆ ಬರುವಂತೆ ಮಾಡಿದ್ದು, ‘ಸಿಧು’ ಅದೇ ರೀತಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯ ಸ್ಥಿತಿಗೆ ಬರುವಂತೆ ಮಾಡುವುದು ‘ಸಿದ್ದು’..” ಎಂದು ಟ್ರೋಲ್ ಮಾಡಲಾಗುತ್ತಿದೆ. ಇನ್ನೊಂದೆಡೆ ಈ ಇಬ್ಬರು ನಾಯಕರ ನಡುವೆ ಅನೇಕ ಹೋಲಿಕೆಗಳಿವೆ ಎಂದು ಟ್ರೋಲ್ ಮಾಡುತ್ತಿದ್ದು, ಅಧಿಕಾರಕ್ಕಾಗಿ ಸಿಧು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಚರಣ್‍ಜಿತ್ ಸಿಂಗ್ ಚೆನ್ನಿ ಜೊತೆ ನಿರಂತರ ಸಂಘರ್ಷ ನಡೆಸಿದರು.

ಅದೇ ರೀತಿ ಸಿದ್ದು ಕೂಡಾ ಅಧಿಕಾರಕ್ಕಾಗಿ ಡಿಕೆ ಶಿವಕುಮಾರ್‍ರೊಂದಿಗೆ ನಿರಂತರವಾಗಿ ಸಂಘರ್ಷಕ್ಕೆ ಇಳಿದಿದ್ದಾರೆ. ಈ ಎರಡು ಸಂಗತಿಗಳ ಸಾಮಾನ್ಯ ಫಲಿತಾಂಶವೆಂದರೆ, ತಾವು ನಾಶವಾಗುವುದು ಜೊತೆಗೆ ಪಕ್ಷವನ್ನು ನಾಶ ಮಾಡುವುದು ಎಂದು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಟ್ರೋಲ್‍ಗಳ ಅಭಿಪ್ರಾಯ ಏನೇ ಇದ್ದರು, ಪಂಚರಾಜ್ಯಗಳ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಪಕ್ಷದಲ್ಲಿರುವ ಎಲ್ಲ ಸಮಸ್ಯೆಗಳನ್ನು ಈಗಲೇ ಪರಿಹರಿಸಿಕೊಂಡು, ಒಗ್ಗಟ್ಟಾಗಿ ಮುಂಬರುವ ಚುನಾವಣೆ ಎದುರಿಸಬೇಕು. ಇದ್ದವಾದರೆ ಪಂಜಾಬ್‍ನಲ್ಲಾದಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ.

ಪಂಚರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಿಜೆಪಿ ಭಾರೀ ಹುಮ್ಮಸ್ಸಿನಲ್ಲಿದೆ. ಮುಂಬರುವ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳ ಮೇಲೆ ಕೇಂದ್ರ ಬಿಜೆಪಿ ವರಿಷ್ಠರು ಕಣ್ಣಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೇರುವ ಸಾಧ್ಯತೆ ಇರುವುದು ಕರ್ನಾಟಕದಲ್ಲಿ ಮಾತ್ರ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಗೆ ಪೈಪೋಟಿ ನೀಡಬಹುದು.

ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಇನ್ನಾದರು ಎಚ್ಚೆತ್ತುಕೊಳ್ಳಬೇಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಶೇಕಡಾ 35ಕ್ಕಿಂತ ಹೆಚ್ಚಿನ ಮತಬ್ಯಾಂಕ್ ಅನ್ನು ಹೊಂದಿದೆ. ಅದೇ ರೀತಿ ಬಿಜೆಪಿ ಕೂಡಾ ಶೇಕಡಾ 35ಕ್ಕಿಂತ ಹೆಚ್ಚಿನ ಮತಬ್ಯಾಂಕ್ ಹೊಂದಿದ್ದು, ಎರಡು ಪಕ್ಷಗಳು ಸಮಾನ ಶಕ್ತಿ ಹೊಂದಿವೆ. ಹೀಗಾಗಿ ಅಧಿಕಾರಕ್ಕೇರಬೇಕಾದರೆ ಎರಡು ಪಕ್ಷಗಳು ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ.

Exit mobile version