ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬ್ಯಾನ್ : ಇದು ದೌರ್ಜನ್ಯ ಎಂದ ಸಿದ್ದರಾಮಯ್ಯ!

siddaramaiah

ಮುಸ್ಲಿಂ(Muslim) ವ್ಯಾಪಾರಿಗಳಿಗೆ ಹಿಂದೂ(Hindu) ಧಾರ್ಮಿಕ ಉತ್ಸವ ಮತ್ತು ಜಾತ್ರೆಗಳಲ್ಲಿ ನಿರ್ಬಂಧ ಹೇರಲಾಗುತ್ತಿರುವ ಕ್ರಮವನ್ನು ವಿಪಕ್ಷ ನಾಯಕ(Opposition Leader)“ಇದೊಂದು ವ್ಯವಸ್ಥಿತ ದೌರ್ಜನ್ಯ” ಎಂದು ಟೀಕಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹೈಕೋರ್ಟ್ನ ತ್ರಿಸದಸ್ಯ ಸಾಂವಿಧಾನಿಕ ಪೀಠ ಶಾಲಾ -ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಮತ್ತು ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೆಲ ಮುಸ್ಲಿಂ ಸಂಘಟನೆಗಳು ತೀರ್ಪಿನ ವಿರುದ್ದ ಒಂದು ದಿನದ ಬಂದ್ ಗೆ ಕರೆ ನೀಡಿದ್ದವು.

ಇದರ ಪರಿಣಾಮವಾಗಿ ರಾಜ್ಯಾದ್ಯಂತ ಅನೇಕ ಮುಸ್ಲಿಂ ವ್ಯಾಪಾರಿಗಳು ಬಂದ್ ಗೆ ಬೆಂಬಲ ಸೂಚಿಸಿ ತಮ್ಮ ವ್ಯಾಪಾರಗಳನ್ನು ಸ್ಥಗಿತಗೊಳಿಸಿದ್ದರು. ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡಿದ ಮುಸ್ಲಿಂ ವ್ಯಾಪಾರಿಗಳಿಗೆ ಪಾಠ ಕಲಿಸಲು ಮುಂದಾದ ಕೆಲ ಹಿಂದೂ ಸಂಘಟನೆಗಳು, ಹಿಂದೂ ಧಾರ್ಮಿಕ ಉತ್ಸವ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಅಭಿಯಾನ ಆರಂಭಿಸಿದ ಪರಿಣಾಮ ಅನೇಕ ಕಡೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ದಕ್ಷಿಣ ಕನ್ನಡದ ಪ್ರಸಿದ್ದ ಕಾಪು ಮಾರಿಗುಡಿ ಜಾತ್ರೋತ್ಸವದಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿದೆ.

ಅನೇಕ ಕಡೆ ಬ್ಯಾನರ್ ಹಾಕಲಾಗಿದ್ದು, ” ನಮ್ಮ ದೇಶದ ಸಂವಿಧಾನವನ್ನು ಗೌರವಿಸದ ಮತ್ತು ನಾವು ಪೂಜಿಸುವ ಗೋಮಾತೆಯನ್ನು ಕಡಿದು ತಿನ್ನುವ ಕಟುಕರೊಂದಿಗೆ ನಾವು ವ್ಯಾಪಾರ ಮಾಡುವುದಿಲ್ಲ” ಎಂದು ಎಲ್ಲೆಡೆ ಅಭಿಯಾನ ಆರಂಭವಾಗಿದೆ. ಈ ಅಭಿಯಾನದ ಬಿಸಿ ಬೀದಿಬದಿ ವ್ಯಾಪಾರ ಮಾಡುವ ಮುಸ್ಲಿಂ ವ್ಯಾಪಾರಿಗಳಿಗೆ ತಟ್ಟಿದ್ದು, ದಯವಿಟ್ಟು ನಮಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಜಾತ್ರೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಕ್ರಮ ಇದೀಗ ಎಲ್ಲೆಡೆ ಹರಡುತ್ತಿದೆ. ಕರಾವಳಿಯ ಅನೇಕ ಜಾತ್ರೆಗಳಲ್ಲಿ ಈಗಾಗಲೇ ನಿರ್ಬಂಧ ಹೇರಲಾಗಿದೆ. ಇದು ಕರ್ನಾಟಕದಾದ್ಯಂತ ಹರಡುವ ಲಕ್ಷಣಗಳಿದ್ದು, ಶೀಘ್ರವೇ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ. ಇನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡಾ ಹಿಂದೂ ಸಂಘಟನೆಗಳ ಈ ಕ್ರಮವನ್ನು ದೌರ್ಜನ್ಯ ಎಂದು ಟೀಕಿಸಿದ್ದಾರೆ.

Exit mobile version