ಪಾದಯಾತ್ರೆ ಕೈ ಬಿಡಿ – ಎಸ್‌.ಎಂ. ಕೃಷ್ಣ ಮನವಿ

sm krishna

ಬೆಂಗಳೂರು ಜ 12 : ಕೋವಿಡ್‌ ಮತ್ತು ಒಮಿಕ್ರಾನ್‌ ಹೆಚ್ಚುತ್ತಿರುವ ಬೆನ್ನಲ್ಲೇ ಪಾದಯಾತ್ರೆ ನಿಲ್ಲಿಸುವಂತೆ  ಎಸ್‌.ಎಂ. ಕೃಷ್ಣ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜಕೀಯ ಗುರು ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆಯಿಂದ ಜನರ ಜೀವಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಪಾದಯಾತ್ರೆಯನ್ನು ಕೈಬಿಡಲು ಕೋರಿದ್ದಾರೆ.

ತಮ್ಮ ನೇತೃತ್ವದಲ್ಲಿ ಮೇಕದಾಟು ಸಂಗಮದಿಂದ ಬೆಂಗಳೂರಿನವರೆಗೆ ಬೆಂಗಳೂರಿನ ಭವಿಷ್ಯ ಹಾಗೂ ಸಾರ್ವಜನಿಕ ಕುಡಿಯುವ ನೀರಿನ ಬವಣಿಯನ್ನು ಶಾಶ್ವತವಾಗಿ ನಿವಾರಿಸಲು ರಾಜ್ಯದ ಬಹುದಿನಗಳ ಬೇಡಿಕೆಯಾದ ಮೇಕೆದಾಟು ಅಣಿಕಟ್ಟು ನಿರ್ಮಾಣ ಸಂಬಂಧ ಸರ್ಕಾರಗಳ ಗಮನ ಸಳೆಯಲು ತಾವು ಕೈಗೊಂಡಿರುವ “ನೀರಿಗಾಗಿ ನಡಿಗೆ” ಪಾದಯಾತ್ರೆಯ ಆಹ್ವಾನಕ್ಕೆ ಧನ್ಯವಾದಗಳು. ಈ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮನುಕುಲಕ್ಕೆ ಗಂಡಾಂತರವಾಗಿ ಕಾಡುತ್ತಿರುವ ಕೋವಿಡ್ ವೈರಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ವಿವಿಧ ರೀತಿಯಲ್ಲಿ ರೂಪಾಂತರಗೊಂಡು ನಮ್ಮನ್ನು ಕಾಡುತ್ತಿದೆ. ಇದರ ಬೇನೆಯಿಂದ ಇಡೀ ಪ್ರಪಂಚ ನಲುಗಿ ಹೋಗಿದ್ದು ಹಲವು ಸಾವು ನೋವುಗಳು ಸಂಭವಿಸಿ ಅನಾಹುತ ಸೃಷ್ಟಿಸಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಇನ್ನು ತಹಬದಿಗೆ ಬಂದಿಲ್ಲ ಎಂದ್ದಿದ್ದಾರೆ.

ಬೆಂಗಳೂರು ವಿಶ್ವದ ನಗರಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದು, ಪ್ರಪಂಚದ ನಾನಾ ಮೂಲೆಗಳಿಂದ ಪ್ರತಿನಿತ್ಯ ಜನರು ಬಂದು ಹೋಗುತ್ತಿದ್ದಾರೆ. ಇದರ ಮಧ್ಯೆ ಕೊರೋನಾ ವೈರಸ್ ವೇಗವಾಗಿ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ತಾವು ಕೈಗೊಂಡಿರುವ ಪಾದಯಾತ್ರೆ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

Exit mobile version