ಮತ್ತೆ ಕಾಂಗ್ರೆಸ್ ಅಧ್ಯಕ್ಷೆಯಾದ ಸೋನಿಯಾ ಗಾಂಧಿ!

sonia gandhi

ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ, ಪಕ್ಷದ ಆಂತರಿಕ ವಲಯದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಆರಂಭವಾಗಿತ್ತು. ಜಿ-23 ನಾಯಕರು ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಕಾಂಗ್ರೆಸ್‍ನಲ್ಲಿ ನಾಯಕತ್ವದಲ್ಲಿ ಬದಲಾವಣೆ ಕುರಿತು ಚರ್ಚೆ ನಡೆಸಲು, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಭಾನುವಾರ ನವದೆಹಲಿಯಲ್ಲಿ ನಡೆಯಿತು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಾಯಕತ್ವ ಬದಲಾವಣೆಯ ಕುರಿತು ನಡೆದ ಚರ್ಚೆಯಲ್ಲಿ ನಾಯಕತ್ವವನ್ನು ಗಾಂಧಿ ಮನೆತನದ ಹೊರತಾದ ವ್ಯಕ್ತಿಗೆ ವಹಿಸುವುದು ಬೇಡ ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯವರನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಕೂಗು ಕೇಳಿ ಬಂದಿತು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿಯವರನ್ನೇ ಪುನಃ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಗುಲಾಮ್ ನಬಿ ಆಜಾದ್, ಅಂಬಿಕಾ ಸೋನಿ, ಕಪಿಲ್ ಸಿಬಲ್, ಅಶೋಕ ಗೆಹಲೋಟ್, ದಿಗ್ವಿಜಯ್ ಸಿಂಗ್ ಸೇರಿದಂತೆ ಮುಂತಾದ ಹಿರಿಯ ನಾಯಕರು ಭಾಗವಹಿಸಿದ್ದರು. ಇನ್ನು ಸೋನಿಯಾ ಗಾಂಧಿ ಅವರನ್ನು ಮತ್ತೆ ಆಯ್ಕೆ ಮಾಡುವುದರಿಂದ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಸೋನಿಯಾ ಗಾಂಧಿಯವರಿಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರಿಗೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಪಕ್ಷದ ಜವಾಬ್ದಾರಿ ಹೊರಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಗಾಂಧಿ ಮನೆತನದವರು ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ದರಿದ್ದರು ಎನ್ನುವ ಮಾತು ಕೇಳಿಬಂದಿದೆ. ಆದರೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಹಿರಿಯ ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಸೋನಿಯಾ ಗಾಂಧಿಯವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡುವುದು ಅನಿವಾರ್ಯವಾಯಿತು.

ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆಯಾದ್ರು, ಮತ್ತೆ ಮತ್ತೆ ಗಾಂಧಿ ಮನೆತನದವರೇ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಪ್ರಾದೇಶಿಕ ನಾಯಕರ ಪ್ರಕಾರ, ಗಾಂಧಿ ಮನೆತನದವರು ನಾಯಕತ್ವ ತ್ಯಜಿಸಿದ್ರೆ, ಕಾಂಗ್ರೆಸ್ ಪಕ್ಷ ಒಟ್ಟಾಗಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಇತ್ತೀಚೆಗೆ ಗಾಂಧಿ ಮನೆತನದವರೆ ಮತ್ತೇ ಅಧ್ಯಕ್ಷರಾದ್ರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಗಾಂಧಿ ಮನೆತನ ಸದ್ಯ ರಾಜಕೀಯವಾಗಿ ಅಪ್ರಸ್ತುತವಾಗುತ್ತಿದೆ.

ಮತದಾರರನ್ನು ಸೆಳೆಯುವ ಸಾಮರ್ಥ್ಯ ಈಗ ಅವರಿಗೆ ಉಳಿದಿಲ್ಲ. ಮೋದಿಯಂತಹ ನಾಯಕನ ಎದುರು ಹೋರಾಡುವ ಸಾಮರ್ಥ್ಯವೂ ಗಾಂಧಿ ಮನೆತನಕ್ಕಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರತಿ ಬಾರಿ ಚುನಾವಣೆಯಲ್ಲಿ ಸೋತಾಗಲೂ ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತದೆ. ಆತ್ಮಾವಲೋಕನವೂ ನಡೆಯುತ್ತದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನಬಹುದು.

Exit mobile version