Bengaluru: ಬಿಜೆಪಿ ನಿನ್ನೆ (ಜ.3) ರಾಜ್ಯಾದ್ಯಂತ ಕರಸೇವಕ ಶ್ರೀಕಾಂತ್ ಪೂಜಾರಿ #SrikanthPoojary ಬಂಧನ ಖಂಡಿಸಿ ಭಾರೀ ಪ್ರತಿಭಟನೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ (R Ashok) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ವಿರುದ್ಧದ ಕೇಸ್ಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿ ಟ್ವೀಟ್:
ಈ ಕುರಿತು ಟ್ವೀಟ್ (Tweet) ಮಾಡಿರುವ ಸಿದ್ದರಾಮಯ್ಯ ಅವರು, ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ (Shree Rama Chandra) ಕ್ಷಮಿಸಲಾರ.
ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ (BJP) ನಾಯಕರು, ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ. ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಹೇಳಿದ್ದಾರೆ.
ಅಪರಾಧಗಳನ್ನು ಮಾಡುವವರು, ಹೇಯಾ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ? ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೇ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ.
ಇದರಲ್ಲಿ ಪ್ರತೀಕಾರವೂ ಇಲ್ಲ, ತುಷ್ಟೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು, ಮಾಡಿದ್ದಾರೆ ಎಂದು ಸಿದ್ದರಾಮಯ್ಯ @Siddaramaiah ಸಮರ್ಥಿಸಿಕೊಂಡಿದ್ದಾರೆ. ಕಳೆದ ವರ್ಷ ಹುಬ್ಬಳ್ಳಿ-ಧಾರವಾಡ (Hubli-Dharwad) ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ (LPC) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ.
ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ.
ಭವ್ಯಶ್ರೀ ಆರ್ ಜೆ