ಕುರುಬರಿಗೆ ಎಸ್ಟಿ ಮೀಸಲಾತಿ: ಯಾರೋ ಒಬ್ಬರ ತೀರ್ಮಾನದಿಂದ ಆಗುವುದಲ್ಲ: ಸಿದ್ದರಾಮಯ್ಯ ಕಿಡಿ

ಮೈಸೂರು, ಫೆ. 10: ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವುದನ್ನು ಯಾರೋ ಒಬ್ಬರು ಮಾಡುವ ತೀರ್ಮಾನವಲ್ಲ. ಯಾವುದೋ ಸಭೆ ಸಮಾರಂಭದಲ್ಲಿ ಆಗುವ ತೀರ್ಮಾನವೂ ಅಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮೀಸಲಾತಿ ವಿರುದ್ಧವೇ ಇವೆ. ಖಾಸಗೀಕರಣದ ಹೆಸರಿನಲ್ಲಿ ಮೀಸಲಾತಿ ಕಿತ್ತುಕೊಳ್ಳುತ್ತಿವೆ. ಅಂತಹ ಪರಿಸ್ಥಿತಿ ಬಂದರೆ ಅಹಿಂದ ಪರವಾಗಿ ಹೋರಾಟ ಮಾಡಲಾಗುವುದು. ಕುರುಬರಿರಲಿ ಅಥವಾ ಯಾರೇ ಇರಲಿ ಅವರಿಗೆ ಸಂವಿಧಾನಾತ್ಮಕವಾಗಿ ಮೀಸಲಾತಿ ಸಿಗುವುದಿದ್ದರೆ ಸಿಗಲಿ. ನಾನು ಕುರುಬರನ್ನು ಎಸ್ಟಿಗೆ ಸೇರಿಸುವ ವಿಷಯದಲ್ಲಿ ವಿರೋಧ ಮಾಡುವುದಿಲ್ಲ. ಆದರೆ, ರಾಜ್ಯದಲ್ಲಿ ಹಿಂದುಳಿದವರು ದಲಿತರು ಅಲ್ಪಸಂಖ್ಯಾತರಿಗೆ ಅನ್ಯಾವಾದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು ಎಂದರು.

ಇದೇ ವೇಳೆ ಕುರುಬರನ್ನು ಎಸ್ ಟಿಗೆ ಸೇರಿಸಿದರೆ ಮೋದಿಗೆ ಬೆಂಬಲ ಎಂಬ ಕುರುಬ ಸಮುದಾಯದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಯಾರೋ ಒಬ್ಬರು ಮಾಡುವ ತೀರ್ಮಾನವಲ್ಲ. ಯಾವುದೋ ಸಭೆ ಸಮಾರಂಭದಲ್ಲಿ ಆಗುವ ತೀರ್ಮಾನವೂ ಅಲ್ಲ. ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ಯಾರ ಪರ, ಯಾರ ವಿರೋಧ ಅನ್ನೋದನ್ನು ಜನರು ತೀರ್ಪು ನೀಡುತ್ತಾರೆ ಎಂದರು.

Exit mobile version