ಕುರಿ ಕಾಯಲು ತೋಳವನ್ನಿಟ್ಟಿದ್ದು ಯಾವ ಸರ್ಕಾರ? ; ಲೋಕಾಯುಕ್ತದ ಸಮಾಧಿ ಮಾಡಿದ್ದು ಯಾರು? : ಬಿಜೆಪಿ ಪ್ರಶ್ನೆ

bjp

ಕುರಿ ಕಾಯಲು ತೋಳವನ್ನಿಟ್ಟಿದ್ದು ಯಾವ ಸರ್ಕಾರ? ಲೋಕಾಯುಕ್ತದ ಸಮಾಧಿ ಮಾಡಿದ್ದು ಯಾರು? ನಿಷ್ಪಕ್ಷಪಾತವಾಗಿ ಅಧಿಕಾರಿಗಳನ್ನು ಬಂಧಿಸುತ್ತಿರುವ ನಮ್ಮ ಸರ್ಕಾರದ ನಡೆ ಭ್ರಷ್ಟಾಚಾರ(Corruption) ಮುಕ್ತ ವ್ಯವಸ್ಥೆಯ ನಿರ್ಮಾಣಕ್ಕೆ ಹಿಡಿದ ಕನ್ನಡಿ. ಹಿಂದಿನ ಸರ್ಕಾರ ಇದೇ ತೋಳದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದು ರಾಜ್ಯ ಬಿಜೆಪಿ(State BJP) ಕಾಂಗ್ರೆಸ್‌ ಪಕ್ಷದ(Congress Party) ವಿರುದ್ದ ವಾಗ್ದಾಳಿ ನಡೆಸಿದೆ.


ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಎಡಿಜಿಪಿ ಅಮೃತ್‌ ಪೌಲ್‌ ಬಂಧನವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿದ್ದು, ಯಾವುದೇ ಅಧಿಕಾರಿ ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಬಿಜೆಪಿ ಸರ್ಕಾರ ಕೈಕಟ್ಟಿ ಕೂರುವುದಿಲ್ಲ. ನಿಷ್ಪಕ್ಷ ತನಿಖೆಯಿಂದ ಪ್ರಭಾವಿಗಳನ್ನು ಕಾನೂನಿನ ಮುಂದೆ ನಿಲ್ಲಿಸುತ್ತೆ. ಇದು ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಮುನ್ನುಡಿಯಷ್ಟೆ. ಬಿಲದಲ್ಲಿ ಅವಿತು ಕೂತಿರುವ ಹಿಂದಿನ ಸರಕಾರದ ಹೆಗ್ಗಣಗಳು ಆಚೆ ಬರುವ ಕಾಲ ಹತ್ತಿರ ಬಂದಿದೆ. ಕಾಣದ ‘ಕೈ’ಗಳ ಹೆಸರು ಹೊರಬರುವ ಭಯದಲ್ಲಿ ಕೆಲವರಿದ್ದಾರೆ.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೆಂಪಯ್ಯ ಗೃಹ ಸಚಿವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, 3 ಜನ ಗೃಹ ಮಂತ್ರಿಗಳು ಬದಲಾಗಿದ್ದು ಜನತೆಗೆ ಗೊತ್ತಿದೆ. ಇಂದು ಭ್ರಷ್ಟಾಚಾರದ ಬಗ್ಗೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರು ಅಂದು ತೆಪ್ಪಗಿದ್ದಿದ್ದು ಯಾಕೆ? ಎಂದು ಪ್ರಶ್ನಿಸಿದೆ. ಎಡಿಜಿಪಿ ಅಮೃತ್ ಪೌಲ್ ಬಂಧನ ಬಸವರಾಜ್‌ ಬೊಮ್ಮಾಯಿ(Basavaraj Bommai) ಅವರ ಸರಕಾರಕ್ಕೆ ಮುಖಭಂಗವಲ್ಲ. ಇದು ಭ್ರಷ್ಟಾಚಾರದ ‘ಕೈ’ಗೆ ಕೊಟ್ಟ ಛಡಿಯೇಟು.

ಭ್ರಷ್ಟಾಚಾರದಲ್ಲಿ ತೊಡಗಿಕೊಂಡ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ರಾಜ್ಯದಲ್ಲಿ ಇದುವರೆಗೂ ಯಾವುದೇ ಸರಕಾರ ಬಂಧಿಸಿರಲಿಲ್ಲ. ರಾಜ್ಯ ಬಿಜೆಪಿ ಸರಕಾರ ಭ್ರಷ್ಟರನ್ನು ಬಗ್ಗು ಬಡಿಯಲು ಪಣ ತೊಟ್ಟು ನಿಂತಿದೆ ಎಂದಿದೆ.

Exit mobile version