ನ್ಯಾಯಾಧೀಶರ ಬಗ್ಗೆ ಹೇಳಿಕೆ: ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಮೇ. 14: ಕೊರೊನಾ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆ ಕುರಿತು ರಾಜಕೀಯ ನಾಯಕರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ವಿ.ಸದಾನಂದಗೌಡ ಅವರೇ, ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು ಕೂಡಾ, ಅದನ್ನೆಲ್ಲ ಮಾಡಲು ಹೋಗಬೇಡಿ,
ಆಡಳಿತ ನಡೆಸುವುದು ನಿಮಗಾಗದ ಕೆಲಸ, ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೊರಟುಬಿಡಿ,‌ದೇಶಕ್ಕಾಗಿ ಅಷ್ಟು ಮಾಡಿ‌ ಪುಣ್ಯ ಕಟ್ಕೊಳ್ಳಿ ಎಂದು ಟೀಕಿಸಿದ್ದಾರೆ.

ಇನ್ನೂ ಇದೇ ವಿಚಾರವಾಗಿ ಹೇಳಿಕೆ ನೀಡಿರುವ ಸಿ.ಟಿ. ರವಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, ಜನರ ಸಂಕಟಕ್ಕೆ ದನಿಯಾಗಲು ಸರ್ವಜ್ಞನಾಗಬೇಕಿಲ್ಲ, ಮಾನವೀಯತೆಯುಳ್ಳ ಮನುಷ್ಯನಾಗಿದ್ದರೆ ಸಾಕು.
ಅಧಿಕಾರದ ದುರಹಂಕಾರ ಬಿಟ್ಟು ಮೊದಲು ಮನುಷ್ಯರಾಗಿ. ನ್ಯಾಯಾಧೀಶರ ನಿಂದನೆ ನ್ಯಾಯಾಲಯದ ನಿಂದನೆ ಕೂಡಾ ಆಗುತ್ತದೆ ಎಂದು ಗೊತ್ತಿಲ್ಲದ ನಿಮ್ಮಂತಹವರನ್ನು
ಸರ್ವಜ್ಞ ಎನ್ನುವುದಿಲ್ಲ, ಮೂರ್ಖ ಎನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಕೋವಿಡ್‌ ನಿರ್ವಹಣೆಗೆ ನ್ಯಾಯಾಂಗದಿಂದ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂದಿದ್ದರು. ಇದಲ್ಲದೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಾಕಷ್ಟು ಲಸಿಕೆ ಉತ್ಪಾದನೆಯಾಗದಿದ್ದರೆ ನಾವೇನು ನೇಣು ಹಾಕಿಕೊಳ್ಳಲಿಕ್ಕೆ ಆಗುತ್ತದಾ? ಎಂದು ಪ್ರಶ್ನಿಸಿದ್ದರು.

Exit mobile version