ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ, ಇಂದು ಕೂಡ ಬ್ಯಾಂಕ್ ನೌಕರರ ಮುಷ್ಕರ

ನವದೆಹಲಿ, ಮಾ. 16: ದೇಶದ 2 ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಕೂಡ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ನಿನ್ನೆಯೂ ಮುಷ್ಕರ ನಡೆದಿದ್ದು, ಇಂದು ಪ್ರತಿಭಟನೆ ಮುಂದುವರೆಯಲಿದೆ. ಇದರಿಂದ ಇಂದು ಎಟಿಎಂ ಹಾಗೂ ಬ್ಯಾಂಕ್‌ ಸೇವೆಗಳಲ್ಲಿ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಎರಡು ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್​ನಡಿ ಬ್ಯಾಂಕ್ ನೌಕರರು 2ನೇ ದಿನವಾದ ಇಂದು ದೇಶಾದ್ಯಂತ ಮುಷ್ಕರ ಮುಂದುವರೆಸಲಿದ್ದಾರೆ. 9 ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದ್ದು, ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸುತ್ತಿದ್ದು, ಎಸ್​ಬಿಐ, ಐಸಿಐಸಿಐ, ಹೆಚ್​ಡಿಎಫ್​ಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ.

ಸರ್ಕಾರದ ಹೂಡಿಕೆ ಯೋಜನೆಯಡಿ ಎರಡು ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕಳೆದ ತಿಂಗಳು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಕೇಂದ್ರ ಸರ್ಕಾರ ಈಗಾಗಲೇ ಐಡಿಬಿಐ ಬ್ಯಾಂಕನ್ನು ಅದರ ಅತಿ ಹೆಚ್ಚಿನ ಪಾಲಿನ ಷೇರನ್ನು ಎಲ್​ಐಸಿಗೆ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿದೆ. ಹೀಗಾಗಿ, ಮತ್ತೆರಡು ಬ್ಯಾಂಕ್​ಗಳ ಖಾಸಗೀಕರಣಕ್ಕೆ ವಿರೋಧ ಕೇಳಿಬಂದಿದೆ.

Exit mobile version