ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

 ಚಿಕ್ಕಮಗಳೂರು ನ 13 : ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್ ಹಾಕಿ ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜುಬೇದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎಂದು ಗುರುತಿಸಲಾಗಿದೆ. ಎನ್.ಆರ್.ಪುರ ತಾಲೂಕಿನ ಮುನ್ಸಿಪಾಲಿಟಿ ಮೆಂಬರ್ ಆಗಿದ್ದು ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಿದ್ದಕ್ಕೆ ಮನನೊಂದು ಜುಬೇದಾ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹಾಲಿ ಅಧ್ಯಕ್ಷೆ ಸುರಯ್ಯಭಾನು ನ.7 ರಂದು ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಒಳ ಒಪ್ಪಂದಂತೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಸುರಯ್ಯಭಾನು ಯೂ ಟರ್ನ್ ಹೊಡೆದು ನಾನು ಆಶ್ರಯ ಸಮಿತಿ ಸಭೆ ಹಾಗೂ ಬಜೆಟ್ ಸಭೆ ನಡೆಸಿಯೇ ರಾಜೀನಾಮೆ ನೀಡುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಇತ್ತ ಪಕ್ಷದ ಕೆಲ ಮುಖಂಡರುಗಳು ಜುಬೇದಗೆ ಅಧ್ಯಕ್ಷೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಪಕ್ಷ ಕ್ಯಾರೇ ಎನ್ನದೆ ಜುಬೇದ ಅಧ್ಯಕ್ಷೆ ಸ್ಥಾನಕ್ಕೆ ಅಡ್ಡಗಾಲು ಹಾಕಿದ್ದರು ಎನ್ನಲಾಗಿದೆ.

ಸಮಾಜ ಸೇವೆಯಲ್ಲಿ ಜನಮನ ಮನ್ನಣೆ ಪಡೆದಿದ್ದ ಜುಬೇದಗೆ ಅಧ್ಯಕ್ಷ ಸ್ಥಾನ ನೀಡಲು ವಿಳಂಬವಾಗಿದ್ದರಿಂದ ಮನನೊಂದ ಜುಬೇದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ ಎನ್.ಆರ್.ಪುರ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಮುಖಂಡರಲ್ಲೇ ಜುಬೇದ ಅವರನ್ನು ಅಧ್ಯಕ್ಷೆ ಮಾಡಲು ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Exit mobile version