ಹಾಲಕ್ಕಿ ಒಕ್ಕಲಿಗರನ್ನು ಎಸ್‌ಟಿಗೆ ಸೇರ್ಪಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಧರಣಿ – ಮಾಜಿ ಶಾಸಕ ಸತೀಶ್ ಸೈಲ್

ವಿಜಯಟೈಮ್ಸ್ ವರದಿ ಫಲಶ್ರುತಿ, ಸುಕ್ರಜ್ಜಿ ಮನೆಗೆ ರಾಜಕೀಯ ನಾಯಕರ ದಂಡು”

ಕಾರವಾರ ಅ 16 : ಹಾಲಕ್ಕಿ ಒಕ್ಕಲಿಗರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ, ಮುಂಬರುವ ಬೆಳಗಾವಿ ಅಧಿವೇಶನ ಸಮಯದಲ್ಲಿ ವಿಧಾನಸೌಧದ ಎದುರು ಪಕ್ಷಾತೀತವಾಗಿ ಒಂದು ದಿನದ ಧರಣಿ ನಡೆಸಿ ಕರ್ನಾಟಕ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲು ನಿರ್ಧರಿಸಲಾಗಿದೆ. ಎಂದು ಮಾಜಿ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.

ಸುಕ್ರಜ್ಜಿ ನಿವಾಸದ ಬಳಿ ಅಂಕೋಲಾ ಹಾಲಕ್ಕಿ ಸಮುದಾಯ ನಾಯಕರು ಹಾಗೂ ಇತರೆ ಮುಖಂಡರು ಈ ಕುರಿತು ಗಂಭೀರ ಚರ್ಚೆ ನಡೆಸಿ ಹಾಲಕ್ಕಿ ಒಕ್ಕಲಿಗರ ಬೇಡಿಕೆ ಈಡೇರಿಕೆಗಾಗಿ ಪಕ್ಷಾತೀತ ಹೋರಾಟದ ಅವಶ್ಯಕತೆ ಇದೆ. ಇದರ ಪ್ರಾರಂಭಿಕ ಹಂತವಾಗಿ ಬೆಳಗಾವಿ ಅಧಿವೇಶದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಯಿತು. ಸಮಾಲೋಚನಾ ಸಭೆ ಬಳಿಕ ಹಾಜರಿದ್ದ ಹಾಲಕ್ಕಿ ಸಮಾಜದ ಮತ್ತು ಇತರ ನಾಯಕರೊಂದಿಗೆ ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷ ವೈದ್ಯ ಹನುಮಂತ ಬೊಮ್ಮುಗೌಡ ಅವರನ್ನು ಭೇಟಿಯಾಗಿ ನಮ್ಮ ನಿರ್ಧಾರದ ಕುರಿತು ಅವರೊಡನೆ ಚರ್ಚಿಸಲಾಯಿತು. ವೈದ್ಯ ಹನುಮಂತಗೌಡ ಈ ನಿರ್ಧಾರಕ್ಕೆ ತಮ್ಮ ಪೂರ್ಣ ಸಹಮತಿ ಸೂಚಿಸಿ, ಕೇಂದ್ರಮಟ್ಟದಲ್ಲಿ ಈ ವರೆಗೆ ನಡೆದ ಪ್ರಯತ್ನದ ಪೂರ್ಣ ವಿವರಗಳನ್ನು ದಾಖಲೆಗಳ ಮೂಲಕ ನಮ್ಮೊಂದಿಗೆ ಚರ್ಚಿಸಿ ಹಾಲಕ್ಕಿ ಒಕ್ಕಲಿಗರ ಬೇಡಿಕೆ ಈಡೇರಿಕೆಗಾಗಿ ಇಡೀ ಉತ್ತರ ಕನ್ನಡ ಜನತೆಯ ಬೆಂಬಲ ಪಕ್ಷಾತೀತವಾಗಿ ತಿ ಅವಶ್ಯಕವಾಗಿದೆ ಎಂಬ ತಮ್ಮ ಅಭಿಮತ ವ್ಯಕ್ತಪಡಿಸಿದರು.

ಸಮಾಲೋಚನಾ ಸಭೆಯಲ್ಲಿ ಹಾಲಕ್ಕಿ ಒಕ್ಕಲಿಗರ ನಾಯಕರಾದ ಮಾಜಿ ಶಾಸಕ ಕೆ. ಎಚ್. ಗೌಡ, ರಮಾನಂದ ಬಿ. ನಾಯಕ, ಅಂಕೋಲಾ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಾಂಡುರಂಗ ಗೌಡ, ಪುರಸಭೆ ಸದಸ್ಯ ಪ್ರಕಾಶ್ ಗೌಡ, ಭಾವಿಕೆರೆ ಪಂಚಾಯತ ಅಧ್ಯಕ್ಷ ಪಾಂಡು ಗೌಡ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತ ಗಾಂವ್ಕರ, ಕೆ. ಶಂಭು ಶೆಟ್ಟಿ ಹಾಗೂ ಇನ್ನಿತರರು ಹಾಜರಿದ್ದರು.

Exit mobile version