ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಲು ಕೇರಳ ಕಾಂಗ್ರೆಸ್ ಎಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ, ಮಾ. 15: ಜೋಸ್.ಕೆ. ಮಾಣಿ ನೇತೃತ್ವದ ಕಾಂಗ್ರೆಸ್ (ಎಂ) ಪಕ್ಷ ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಬಹುದು ಸುಪ್ರೀಂಕೋರ್ಟ್ ಹೇಳಿದೆ. ಕಾಂಗ್ರೆಸ್ (ಎಂ) ಪಕ್ಷಕ್ಕೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಕೇರಳ ಕಾಂಗ್ರೆಸ್ ನಾಯಕ ಪಿ.ಜೆ.ಜೋಸೆಫ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿದೆ. ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಣಿಯನ್ ಅವರ ನ್ಯಾಯಪೀಠ ಪಿಜೆ ಜೋಸೆಫ್ ಅವರ ಮೇಲ್ಮನವಿ ಅರ್ಜಿಯನ್ನು ನಿರಾಕರಿಸಿದೆ .

ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಪಿಜೆ ಜೋಸೆಫ್ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, 450 ಸದಸ್ಯರಿರುವ ರಾಜ್ಯ ಸಮಿತಿಯಲ್ಲಿ 255 ಸದಸ್ಯರ ಬೆಂಬಲ ನಮಗಿದೆ. ಇವರ ಬೆಂಬಲವನ್ನು ತೋರಿಸುವ ದಾಖಲೆಗಳನ್ನು ಪರಿಶೀಲಿಸದೆ ಚುನಾವಣಾ ಆಯೋಗ ಜೋಸ್.ಕೆ. ಮಾಣಿ ಅವರ ಪರವಾಗಿ ತೀರ್ಪು ನೀಡಿತ್ತು ಎಂದಿದ್ದಾರೆ. ಈ ವಿಷಯಗಳನ್ನು ಹೈಕೋರ್ಟ್ ಕೂಡಾ ಪರಿಗಣಿಸಿಲ್ಲ ಎಂದಿದ್ದಾರೆ ದಿವಾನ್. ಆದರೆ ಚುನಾವಣಾ ಚಿಹ್ನೆ ನೀಡುವ ಅಧಿಕಾರ ಚುನಾವಣಾ ಆಯೋಗದ್ದು. ಹೈಕೋರ್ಟ್ ತೀರ್ಪು ಬಗ್ಗೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿ ಸುಪ್ರೀಂಕೋರ್ಟ್ ಮೇಲ್ಮನವಿಯನ್ನು ತಳ್ಳಿದೆ.

ಪಿಜೆ ಜೋಸೆಫ್ ಪರವಾಗಿ ಶ್ಯಾಮ್​ ದಿವಾನ್, ರೋಮಿ ಚಾಕೊ ಹಾಜರಾಗಿದ್ದರು. ಜೋಸ್.ಕೆ.ಮಾಣಿ ಪರವಾಗಿ ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್ ಹಾಜರಾಗಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯೋಗವು ಜೋಸ್.ಕೆ. ಮಾಣಿ ಪಕ್ಷಕ್ಕೆ ಎರಡೆಲೆ ಚಿಹ್ನೆ ನೀಡಿತ್ತು.

Exit mobile version