ಟಿ20 ಕ್ರಿಕೆಟ್: ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಪೊಲಾರ್ಡ್: ಲಂಕಾ ವಿರುದ್ಧ ಕೆರೆಬಿಯನ್ನರಿಗೆ 4 ವಿಕೆಟ್ ಜಯ

ಆಂಟಿಗುವಾ, ಮಾ. 04: ನಾಯಕ ಕೀರನ್ ಪೊಲಾರ್ಡ್, ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಪ್ರವಾಸಿ ಶ್ರೀಲಂಕಾ ವಿರುದ್ಧದ ಪ್ರಥಮ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್, ಬೌಲರ್‌ಗಳ ಸಾಂಘಿಕ ಆಟದ ನೆರವಿನಿಂದ ಶ್ರೀಲಂಕಾ ತಂಡವನ್ನು 20 ಓವರ್‌ಗಳಲ್ಲಿ 131 ರನ್‌ಗಳಿಗೆ ಕಟ್ಟಿ ಹಾಕಿತು. ಈ ಸುಲಭದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್, ಕೇವಲ 13.1 ಓವರ್‌ಗಳಲ್ಲಿ 6 ನಷ್ಟಕ್ಕೆ 134 ರನ್‌ಗಳಿಸುವ ಮೂಲಕ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಧನಂಜಯ್ ಹ್ಯಾಟ್ರಿಕ್ ವಿಕೆಟ್
ಶ್ರೀಲಂಕಾ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್, ಉತ್ತಮ ಆರಂಭ ಪಡೆದರು, ಅಕಿಲ ಧನಂಜಯ್ ಮಾಡಿದ ಪಂದ್ಯದ 4ನೇ ಓವರ್‌ನಲ್ಲಿ ಸತತ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ತನ್ನ 2ನೇ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಧನಂಜಯ, ಶ್ರೀಲಂಕಾ ತಂಡಕ್ಕೆ ಮೇಲುಗೈ ನೀಡಿದರು.

ಪೊಲಾರ್ಡ್ ಸ್ಪೋಟಕ ‌ಆಟ
ಈ ಹಂತದಲ್ಲಿ ಕಣಕ್ಕಿಳಿದ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್, ಸ್ಪೋಟಕ ಆಟವಾಡಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಸಂಭ್ರಮದಲ್ಲಿದ್ದ ಅಕಿಲ ಧನಂಜಯ್ ಮಾಡಿದ ಇನ್ನಿಂಗ್ಸ್‌ನ 6ನೇ ಹಾಗೂ ವೈಯಕ್ತಿಕ 3ನೇ ಓವರ್‌ನಲ್ಲಿ ಸತತ ಆರು ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿದರು.

ಈ ಹಿಂದೆ ಟೀಂ ಇಂಡಿಯಾದ ಭರವಸೆಯ ಆಟಗಾರ ಯುವರಾಜ್ ಸಿಂಗ್, 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ಕೀರನ್ ಪೋಲಾರ್ಡ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ
ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸಮನ್ ಎನಿಸಿದರು.

ಈ ಹಿಂದೆ ಯುವರಾಜ್ ಸಿಂಗ್ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್, 2017ರ ಏಕದಿನ ವಿಶ್ವಕಪ್ ಟೂರ್ನಿಯ ನೆದರ್ಲ್ಯಾಂಡ್ಸ್ ವಿರುದ್ಧ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು.

Exit mobile version