ತಲಕಾಡು ಪಂಚಲಿಂಗ ದರ್ಶನಕ್ಕೆ ವಿದ್ಯುಕ್ತ ಚಾಲನೆ

ತಲಕಾಡು, ಡಿ. 14: ಸೋಮವಾರದ ಕುಹುಯೋಗ ಜ್ಯೇಷ್ಠ ನಕ್ಷತ್ರದಲ್ಲಿ ಮುಂಜಾನೆ 4.30ರ ವೇಳೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವದ ಮಹಾಪೂಜೆ, ಮಾಹಾಭಿಷೇಕ ನೆರವೇರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಪಂಚಲಿಂಗ ದರ್ಶನಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

ಈ ಹಿಂದೆ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದಿತ್ತು. ಈಗ ಏಳು ವರ್ಷಕ್ಕೆ ಬಂದಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದ ಸಚಿವರು, ಈ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಸ್ವಾಮಿ ವೈದ್ಯನಾಥೇಶ್ವರನು ಎಲ್ಲರಿಗೂ ಒಳಿತನ್ನು ಮಾಡಲಿ, ನಾಡಿಗೆ ಅಂಟಿರುವ ಕೊರೋನಾ ಮಹಾಮಾರಿ ದೂರವಾಗಲಿ, ಸಕಲರಿಗೂ ಆರೋಗ್ಯ ಹಾಗೂ ಸನ್ಮಂಗಳವನ್ನು ಕರುಣಿಸಲಿ ಎಂದು ಸಚಿವರಾದ ಸೋಮಶೇಖರ್ ಅವರು ಪ್ರಾರ್ಥಿಸಿದರು.

ಏಕಾದಶವಾರ ಆಚರಣೆ
ರುದ್ರಾಭಿಷೇಕ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಮೊಸರು, ಎಳನೀರು, ಭಸ್ಮೋದಿಕೆ, ಗಂಧ, ರುದ್ರೋದಕ, ಸುವರ್ಣ, ಅಕ್ಷತೋದಿಕೆ ಸೇರಿದಂತೆ ವೈದ್ಯನಾಥೇಶ್ವರನಿಗೆ 11 ರೀತಿಯ ಅಭಿಷೇಕಗಳನ್ನು ನೆರವೇರಿಸಲಾಯಿತು.

ಋಗ್ವೇದ, ಯಜುರ್ವೇದ, ಸಾಮವೇದಗಳ ಸಹಿತ ಶ್ರೀಸೂಕ್ತ, ದುರ್ಗಾ ಸೂಕ್ತ, ರುದ್ರಾ, ಚಮೆ ಸೇರಿದಂತೆ ವಿವಿಧ ಮಂತ್ರಘೋಷಗಳ ಪಠಣ ಮಾಡಲಾಯಿತು. ಈ ಮೂಲಕ ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವರುಗಳಿಗೆ ಏಕ ಕಾಲದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ವರ್ಚುವಲ್ ಪ್ರಸಾರ

ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮೈಸೂರು ವಾರ್ತಾ ಇಲಾಖೆ ವತಿಯಿಂದ ವರ್ಚುವಲ್ ಆಗಿ ಪ್ರಸಾರವನ್ನು ಮಾಡಲಾಯಿತು. ಮೈಸೂರು ಸೇರಿದಂತೆ ರಾಜ್ಯ, ಅಂತಾರಾಜ್ಯಗಳ ಜನತೆ ಮನೆಯಿಂದಲೇ ದರ್ಶನ ಮಾಡಿದರು.

Exit mobile version