ತಮಿಳುನಾಡು: ಡಿಎಂಕೆ ಗೆದ್ದಿದ್ದಕ್ಕಾಗಿ ನಾಲಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ

ತಮಿಳುನಾಡು, ಮೇ. 03: ನಮ್ಮ ಕೆಲಸಗಳು ಈಡೇರಲಿ ಎಂದು ವಿವಿಧ ರೂಪದ ಹರಕೆಗಳನ್ನು ಹೊತ್ತು, ಅದನ್ನು ತೀರಿಸುತ್ತೇವೆ. ಹಾಗೇಯೇ ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಮಹಿಳೆಯೊಬ್ಬರು ಹರಕೆ ಹೊತ್ತಿದ್ದರು. ಇದೀಗ ಡಿಎಂಕೆ ಪಕ್ಷವೇ ಗೆದ್ದ ಕಾರಣ ತಮ್ಮ ನಾಲಿಗೆಯನ್ನು ಕತ್ತರಿಸಿ, ದೇವರಿಗೆ ಅರ್ಪಿಸಿದ್ದಾರೆ.

ಹೀಗೊಂದು ಕಷ್ಟಕರವಾದ ಹರಕೆ ತೀರಿಸಿದ ಮಹಿಳೆ ೩೨ ವರ್ಷದ ವನಿತಾ. 2021ರ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದ್ದು, ಅದರಲ್ಲಿ ಡಿಎಂಕೆಗೆ ಬಹುಮತ ಬಂದಿದೆ. ಹೀಗಾಗಿ ಫಲಿತಾಂಶ ಹೊರಬರುತ್ತಿದ್ದಂತೆ ವನಿತಾ ತಮ್ಮ ಹರಕೆ ಸಲ್ಲಿಸಿದ್ದಾರೆ.
ಜನಾದೇಶ ಡಿಎಂಕೆ ಪರವಾಗಿ ಹೊರಬೀಳುತ್ತಿದ್ದಂತೆ ವನಿತಾ ಮುಥಾಲಮ್ಮನ ದೇವಾಲಯಕ್ಕೆ ಹೋಗಿ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅದನ್ನು ಆ ದೇವರಿಗೆ ಅರ್ಪಿಸಲು ಪ್ರಯತ್ನಿಸಿದ್ದಾಳೆ. ಆದರೆ ಕೊವಿಡ್​ 19 ಇರುವ ಕಾರಣಕ್ಕೆ ಅಲ್ಲಿ ಯಾವುದೇ ಪೂಜೆ, ಹರಕೆ ಸಲ್ಲಿಸಲು ಅವಕಾಶ ಇಲ್ಲ. ಹಾಗಾಗಿ ನಾಲಿಗೆಯನ್ನು ದೇಗುಲದ ಬಾಗಿಲನಲ್ಲಿರುವ ಗೇಟ್​ ಬಳಿ ಇಟ್ಟಿದ್ದರು. ಅಷ್ಟರಲ್ಲಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಅದನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.

Exit mobile version