ತನ್ವೀರ್ ಸೇಠ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ: ಕಾಂಗ್ರೆಸ್ ಶಾಸಕನಿಗೆ ಪರೋಕ್ಷ ಆಹ್ವಾನ ಕೊಟ್ಟ ಸಾರಾ ಮಹೇಶ್

ಮೈಸೂರು, ಮಾ. 01: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ, ಜೆಡಿಎಸ್ಗೆ ಸ್ವಾಗತಿಸುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್, ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಪಕ್ಷಕ್ಕೆ ಬರುವಂತೆ ಪರೋಕ್ಷ ಆಹ್ವಾನ ನೀಡಿದರು.

ಮೈಸೂರಿನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ಅವರು ಜೆಡಿಎಸ್ಗೆ ಬಂದರೆ ಸ್ವಾಗತ ಎಂದು ಆಶಯ ವ್ಯಕ್ತಪಡಿಸಿದರು.

ನಾವು ಯಾರ ಪಕ್ಷದಲ್ಲು ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ ಸೇಠ್ ಗೆ ಸಮಸ್ಯೆ ಆದರೆ, ಅವರು ಜೆಡಿಎಸ್ಗೆ ಬರಲಿ. ಅವರ ವಿರುದ್ದ ಸ್ಪರ್ಧಿಸಿದ್ದ ಅಬ್ದುಲ್ಲ ಅವರೇ ಅವರನ್ನು ಸ್ವಾಗತ ಮಾಡುತ್ತಾರೆ. ಪಕ್ಷಕ್ಕೆ ಬಂದರೆ ಟಿಕೆಟ್ ನೀಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮೊದಲು ಅವರು ಪಕ್ಷಕ್ಕೆ ಬರಲಿ ಆಮೇಲೆ ನೋಡೋಣ ಎಂದು ತಿಳಿಸಿದರು.

ಇದೇ ವೇಳೆ ಮೈಸೂರು ಪಾಲಿಕೆಯ ಚುನಾವಣೆ ಗೊಂದಲಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರಮುಖ ಕಾರಣ, ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ನಮ್ಮ ಪಕ್ಷದ ಶಕ್ತಿ ತೋರಿಸಿದ್ದೇವೆ ಎಂದು ಶಾಸಕ ಸಾ.ರಾ.ಮಹೇಶ್ ದಿಟ್ಟ ಹೇಳಿಕೆ ನೀಡಿದರು. ನಮ್ಮ ಪಕ್ಷದ ಬಗ್ಗೆ ಮಾತನಾಡಿದಕ್ಕೆ ಸ್ಯಾಂಪಲ್ ಮಾತ್ರ. ಮತ್ತೆ ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡಿದರೆ, ಏನು ಬೇಕಾದರೂ ಆಗಬಹುದು. ಅವರ ಒಬ್ಬ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ಇಷ್ಟು ತೋರಿಸಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರು ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮೂರು ಮೇಯರ್ ಸ್ಥಾನ ಜೆಡಿಎಸ್ಗೆ 2 ಮೇಯರ್ ಸ್ಥಾನ ಕಾಂಗ್ರೆಸ್ಗೆ ಎಂದು ಮಾತುಕತೆಯಾಗಿತ್ತು. ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದಿದ್ದರಿಂದ ಕೆಲವು ಸನ್ನಿವೇಶಗಳು ಪ್ರಾರಂಭವಾಯಿತು. ಈ ಹಿಂದೆ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಹೋಟೆಲ್ನಲ್ಲಿದ್ದು ರಾಜಕಾರಣ ಮಾಡುತ್ತಾರೆ ಎನ್ನುತ್ತಿದ್ದರು. ನಾವು ಹೋಟೆಲ್ನಲ್ಲಿ ಕುಳಿತು ರಾಜಕಾರಣ ಮಾಡಲು ಕಾರಣ ಯಾರು ಎಂದು ಪ್ರಶ್ನಿಸಿದರು.

ನಾವು ವಾಸ್ತವವಾಗಿ ಯಾರೊಂದಿಗೂ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಸಿರಲಿಲ್ಲ. ಕಾಂಗ್ರೆಸ್ನ ಅಧ್ಯಕ್ಷರು ಹಾಗೂ ಶಾಸಕ ತನ್ವಿರ್ ಸೇಠ್ ನನ್ನ ಕಚೇರಿಗೆ ಬರುತ್ತೇನೆ ಅಂದ್ರು, ಅದಕ್ಕೆ ನಾನು ಬನ್ನಿ ಅಂದೆ. 3 ಮೇಯರ್ ಸ್ಥಾನ ನಿಮಗೆ, ನಮಗೆ 2 ಸ್ಥಾನ ಎಂದು ಅವರೇ ಹೇಳಿದ್ದರು. ಸಿದ್ದರಾಮಯ್ಯ ಹೇಳಿಕೆ ಬಿಟ್ಟರೆ ಕಾಂಗ್ರೆಸ್ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಬಳಿಕ ಬಿಜೆಪಿ ಬಳಗ ನನ್ನ ಕಚೇರಿಗೆ ಬಂದರು, ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದೆ.
ಡಿಕೆಶಿ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿದ್ದರು. ಇದನ್ನು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು. ನಾನು ರಾಜ್ಯಾಧ್ಯಕ್ಷರಾಗಿರುವಾಗ ಮೈಸೂರು ಮೇಯರ್ ಸ್ಥಾನ ಪಡೆಯಲಿಲ್ಲ ಎಂಬಂತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಜೊತೆ ಬನ್ನಿ ಎಂದು ಡಿಕೆಶಿ ಹೇಳಿದ್ದರು.

ಬಳಿಕ ತನ್ವಿರ್ ಸೇಠ್ ಭೇಟಿ ಮಾಡಿದೆವು. ನಂತರ ಧ್ರುವನಾರಾಯಣ್ ಸಹ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಬೆಳವಣಿಗೆ ವಿವರಿಸಿದರು.
ಮುಂದಿನ ಸಾರಿ ಕಾಂಗ್ರೆಸ್ಗೆ ಮೇಯರ್ ಸ್ಥಾನ
ಮಾತಿನಂತೆ ಒಂದು ಬಾರಿ ಜೆಡಿಎಸ್ಗೆ ಮೇಯರ್ ಸ್ಥಾನ. ಮುಂದಿನ ಸಾರಿ ಕಾಂಗ್ರೆಸ್ಗೆ ಮೇಯರ್ ಸ್ಥಾನ ನೀಡುತ್ತೇವೆ. ಆದರೆ, ಕಾಂಗ್ರೆಸ್ ನಾಯಕರ ಮಾತಿನ ಮೇಲೆ ಹಿಡಿತವಿರಬೇಕು. ಯಾವುದೇ ಡ್ರಾಮಾ, ಗೊಂದಲಗಳಿಲ್ಲದೆ ಮೇಯರ್ ಸ್ಥಾನ ನೀಡಲಾಗುವುದು. ಈ ಬಾರಿಯೇ ಕೊಡುತ್ತಿದ್ದೆವು ಆದರೆ, ಪಕ್ಷದ ಬಗ್ಗೆ ಹೀನಾಯವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ. ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೆವು ಅಷ್ಟೇ ಎಂದಿದ್ದಾರೆ.

Exit mobile version