Kolkata: ದಶಕಗಳಿಂದ ನಡೆಯುತ್ತಿದ್ದ ಟಾಟಾ ಮೋಟಾರ್ಸ್ (Tata Motors) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಟಾಟಾ ಮೋಟಾರ್ಸ್ ಗೆದ್ದಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ (Mamata Banerjee) ತೀವ್ರ ಮುಖಭಂಗ ಉಂಟಾಗಿದೆ.

ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಶನ್ (Industrial Development Corporation) ವಿರುದ್ಧ ಸಿಂಗೂರ್ ಆಟೋಮೊಬೈಲ್ (Singur Automobile) ಉತ್ಪಾದನಾ ಸೌಲಭ್ಯ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಜಯಗಳಿಸಿರುವುದಾಗಿ ಟಾಟಾ ಮೋಟಾರ್ಸ್ ಪ್ರಕಟಿಸಿದೆ.
ಏನಿದು ಪ್ರಕರಣ : ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೋ ಕಾರು (Nano Car) ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲು ಎಡರಂಗದ ಸರ್ಕಾರವು ಸಿಂಗೂರ್, ಹೂಗ್ಲಿಯಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಟಾಟಾ ನ್ಯಾನೋಗೆ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಟಾಟಾ ಮೋಟಾರ್ಸ್ಗೆ ಹಸ್ತಾಂತರಿಸಿತು. ಕಾರು ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಟಾಟಾ ಮೋಟಾರ್ಸ್ (Tata Motors) ಸಾಕಷ್ಟು ಬಂಡವಾಳ ಹೂಡಿಕೆ ಮಾಡಿತ್ತು. ಆದರೆ ವಿರೋಧ ಪಕ್ಷದ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಘಟಕ ಸ್ಥಾಪನೆಗೆ ಅನುಮತಿ ನಿರಾಕರಿಸಿತು. ಹೀಗಾಗಿ ನ್ಯಾನೋ ಕಾರು ಉತ್ಪಾನದಾ ಘಟಕ ಬಂಗಾಳದಿಂದ ಗುಜರಾತಿಗೆ ಸ್ಥಳಾಂತರಗೊಂಡಿತು. ಆದರೆ ಬಂಗಾಳದ ಸರ್ಕಾರದ ನೀತಿಯಿಂದಾಗಿ ನಮಗೆ ಉಂಟಾದ ನಷ್ಟವನ್ನು ಭರಿಸಿಕೊಡುವಂತೆ ಟಾಟಾ ಮೋಟಾರ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಇದೀಗ ಕಾನೂನು ಹೋರಾಟದಲ್ಲಿ ಗೆದ್ದಿರುವ ಟಾಟಾ ಮೋಟಾರ್ಸ್ ಪರಿಹಾರವಾಗಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (Industrial Development Corporation Limited) (ಡಬ್ಲ್ಯುಬಿಐಡಿಸಿ) ನಿಂದ 765 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ಸೆಪ್ಟೆಂಬರ್ (September) 1, 2016 ರಿಂದ ವಾರ್ಷಿಕ 11% ಬಡ್ಡಿಯೊಂದಿಗೆ ಪರಿಹಾರವನ್ನು ನೀಡಬೇಕು ಮತ್ತು ಹಕ್ಕುದಾರರು (ಟಿಎಂಎಲ್) ಪ್ರತಿವಾದಿಯಿಂದ (ಡಬ್ಲ್ಯುಬಿಐಡಿಸಿ) 1 ಕೋಟಿ ರೂ. ಮೊತ್ತವನ್ನು ಕಾನೂನು ಪ್ರಕ್ರಿಯೆಯ ವೆಚ್ಚಕ್ಕೆ ಮರುಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣದಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ ಉಂಟಾಗಿದ್ದು, ಅವರ ತಪ್ಪು ನೀತಿಯಿಂದಾಗಿ ಇಂದು ಸಾರ್ವಜನಿಕರ ಅಪಾರ ಹಣ ಪರಿಹಾರವಾಗಿ ನೀಡಬೇಕಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.