ಟೆಂಪೋ ಟ್ರಾವೆಲರ್‌ಗೆ ಟಿಪ್ಪರ್ ಡಿಕ್ಕಿ; 13 ಮಂದಿ ದುರ್ಮರಣ; ಪ್ರಧಾನಿ ಸಂತಾಪ

ಧಾರವಾಡ: ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಮಹಿಳೆಯರು ಸೇರಿದಂತೆ ಓರ್ವ ಟಿಪ್ಪರ್‌ ಚಾಲಕ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಈ ಭೀಕರ ಅಪಘಾತ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಮಹಿಳೆಯರಿದ್ದ ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳುತ್ತಿದ್ದ ವೇಳೆ ಟಿಪ್ಪರ್‌ವೊಂದು ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಧಾರವಾಡದ ರಿದಂ ಜಿಮ್‌ನ ಮಹಿಳಾ ಸದಸ್ಯರು ಸಂಕ್ರಮಣ ಹಿನ್ನೆಲೆ ಗೋವಾಗೆ ಸ್ಮಾಲ್‌ ಟ್ರಿಪ್‌ವೊಂದನ್ನು ಆಯೋಜಿಸಿದ್ದರು. ಈ ಹಿನ್ನೆಲೆ ಇಂದು ಮುಂಜಾನೆ ಟೆಂಪೋ ಟ್ರಾವೆಲರ್‌ನಲ್ಲಿ ಮಹಿಳೆಯರು ಗೋವಾಕ್ಕೆ ಹೊರಟಿದ್ದರು. ಒಟ್ಟು 17 ಮಂದಿ ಮಹಿಳೆಯರು ಟೆಂಪೋದಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಆದರೆ ಏಕಾಏಕಿ ಟಿಪ್ಪರ್‌ವೊಂದು ಯಮದೂತನಂತೆ ಇವರತ್ತ ನುಗ್ಗಿದೆ. ನೋಡ ನೋಡುತ್ತಿದ್ದಂತೆ, ಟೆಂಪೋಗೆ ಡಿಕ್ಕಿ ಹೊಡೆದು, 12 ಮಂದಿ ಮಹಿಳೆಯರ ಪ್ರಾಣವನ್ನು ಕಿತ್ತುಕೊಂಡಿದೆ. ಈ ಪೈಕಿ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಟಿಪ್ಪರ್‌ನಲ್ಲಿದ್ದ ಚಾಲಕ ಕೂಡ ಸಾವನಪ್ಪಿದ್ದಾನೆ.

ಇನ್ನು ಘಟನೆಯಿಂದಾಗಿ ಟೆಂಪೋ ಟ್ರಾವೆಲರ್‌ ಹಾಗೂ ಟಿಪ್ಪರ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟೆಂಪೋ ನುಜ್ಜು ಗುಜ್ಜಾಗಿದ್ದರಿಂದ ಒಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನು ಗಾಯಗೊಂಡವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಕನ್ನಡದಲ್ಲಿಯೇ ಮೃತ ಕುಟುಂಬಸ್ಥರಿಗೆ ಪ್ರಧಾನಿ ಸಾಂತ್ವನ ಹೇಳಿದ್ದಾರೆ.

ಇನ್ನು, ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇತ್ತ ಸಿಎಂ ಬಿಎಸ್‌ ಯಡಿಯೂರಪ್ಪ ಕೂಡ ಟ್ವೀಟ್‌ ಮಾಡಿದ್ದು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.

Exit mobile version