ಉದ್ಯಮಿಸ್ನೇಹಿ ಕ್ಷೇತ್ರಗಳಲ್ಲಿ ಮುಂದಿರುವ ಕರ್ನಾಟಕ ಹೂಡಿಕೆಗೆ ಅತ್ಯಂತ ಸೂಕ್ತ ತಾಣ: ಡಿಸಿಎಂ ಅಶ್ವಥ್ ನಾರಾಯಣ್

ತಿರುವನಂತಪುರಂ, ಮಾ. 30: ಕೋವಿಡ್‌ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಸಹಜಸ್ಥಿತಿಗೆ ಮರಳಿದೆ. ಇದಕ್ಕೆ ಪೂರಕವಾದ ರೀತಿಯಲ್ಲಿ ಕರ್ನಾಟಕವು ಎಲ್ಲಾ ಉದ್ಯಮಿಸ್ನೇಹಿ ಕ್ಷೇತ್ರಗಳಲ್ಲಿ ಮುಂದಿದ್ದು, ಹೂಡಿಕೆಗೆ ಅತ್ಯಂತ ಸೂಕ್ತ ತಾಣವಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಕೇರಳದಲ್ಲಿನ ಚುನಾವಣಾ ಪ್ರಚಾರದ ನಡುವೆಯೇ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ತಿರುವನಂತಪುರದಿಂದಲೇ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಮೊತ್ತಮೊದಲಿಗೆ ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುವ ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ER&D Policy) ಪ್ರಕಟಿಸಿದ್ದು, ಇದರಿಂದ ಅಮೆರಿಕವೂ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ. ಅತ್ಯುತ್ತಮ ಮಾನವ ಸಂಪನ್ಮೂಲ ಸೃಷ್ಟಿಗೂ ಇದು ಸಹಾಯಕವಾಗುತ್ತದೆ.

ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. 220 ಬಿಲಿಯನ್‌ನಷ್ಟು ಒಟ್ಟು ದೇಶದ ಉತ್ಪನ್ನ (ಜಿಎಸ್‌ಡಿಪಿ) ಹೊಂದಿರುವ ಕರ್ನಾಟಕದ ಕೊಡುಗೆ ಅಪಾರ ಎಂದ ಅವರು, ಮಾಹಿತಿ-ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಹೇಳಿದರು.

ವರ್ಚುಯಲ್‌ ಸಭೆಯಲ್ಲಿ ಭಾರತದಲ್ಲಿ ಸ್ಯಾನ್‌ಪ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್‌ ಜನರಲ್‌ ಡಾ.ಟಿ.ವಿ.ನಾಗೇಂದ್ರ ಪ್ರಸಾದ್‌, ಉಪಕಾನ್ಸುಲ್‌ ಜನರಲ್‌ ರಾಜೇಶ್‌ ನಾಯಕ್‌, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್‌ ಛೇಂಬರ್ಸ್‌, ವೆಸ್ಟ್‌ ಕೋಸ್ಟ್‌ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ACS ಡಾ. ರಮಣರೆಡ್ಡಿ ಪಾಲ್ಗೊಂಡಿದ್ದರು.

Exit mobile version