ರಾಜಕೀಯವನ್ನು ಅಪರಾಧಮಕ್ತಗೊಳಿಸಲು ಅಭ್ಯರ್ಥಿಯ ಹಿನ್ನಲೆಯನ್ನು 48ಗಂಟೆಗಳೊಳಗೆ ಪ್ರಕಟಿಸಬೇಕು; ಸುಪ್ರೀಂ ಕೋರ್ಟ್‌

ನವದೆಹಲಿ, . 10: ರಾಜಕೀಯದಲ್ಲಿ ಅಪರಾಧ ಹಿನ್ನೆಲೆ ಇರುವವರ ಸಂಖ್ಯೆ ಹೆಚ್ಚುತ್ತಿರುವ ಕಳವಳಕಾರಿ ಸಂಗತಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ದೇಶನ ಹೊರಡಿಸಿದೆ. ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಲ್ಲಿ ಯಾವುದಾದರೂ ಕ್ರಿಮಿನಲ್ ಕೇಸ್​ಗಳು ಇದ್ದರೆ ಅದನ್ನ ಆ ಅಭ್ಯರ್ಥಿಯ ಆಯ್ಕೆಯಾದ 48 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹೊರಡಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ವಿಚಾರದಲ್ಲಿ ಇದೇ ರೀತಿಯ ತೀರ್ಪು ನೀಡಿತ್ತು. ರಾಜಕೀಯ ಪಕ್ಷಗಳು ಅಭ್ಯರ್ಥಿಯಲ್ಲಿ ಕ್ರಿಮಿನಲ್ ಕೇಸ್ ಇದ್ದರೆ ಅದರ ಮಾಹಿತಿಯನ್ನ 48 ಗಂಟೆಯೊಳಗೆ ಪ್ರಕಟಿಸಬೇಕು. ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ 2 ವಾರ ಮುಂಚಿತವಾಗಿ ಪ್ರಕಟಿಸಬೇಕು ಎಂದು ತನ್ನ ತೀರ್ಪಿನ 4.4 ಪ್ಯಾರಾಗ್ರಾಫ್​ನಲ್ಲಿ ನ್ಯಾಯಪೀಠ ತಿಳಿಸಿತ್ತು. ಇದೀಗ ಎರಡನೇ ಅಂಶವನ್ನು ಕೈಬಿಡಲಾಗಿದ್ದು, ಎರಡು ದಿನದೊಳಗೆ ಅಭ್ಯರ್ಥಿಯ ಕ್ರಿಮಿನಲ್ ಮಾಹಿತಿಯನ್ನು ಪ್ರಕಟಿಸಬೇಕು ಎಂದು ತಿಳಿಸಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳ ಕ್ರಿಮಿನಲ್ ಕೇಸ್​ಗಳ ಮಾಹಿತಿಯನ್ನ ಪ್ರಕಟಿಸಿಲ್ಲ. ಈ ಮೂಲಕ 2020, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್​ನಲ್ಲಿ ದೂರು ದಾಖಲಾಗಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನ ಹೊರಡಿಸಿದೆ. ಇದರ ಜೊತೆಗೆ, ಇನ್ನೂ ಕೆಲ ಹೊಸ ನಿರ್ದೇಶನಗಳನ್ನ ನೀಡಿರುವುದು ತಿಳಿದುಬಂದಿದೆ.

ರಾಜಕೀಯ ಪಕ್ಷಗಳು ಒಂದು ವೇಳೆ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರೆ ಅದಕ್ಕೆ ಕಾರಣ ನೀಡಬೇಕು. ಇಂಥ ಅಭ್ಯರ್ಥಿಯ ಕ್ರಿಮಿನಲ್ ಕೇಸ್​ಗಳ ಮಾಹಿತಿ ಹಾಗೂ ಅವರನ್ನ ಯಾಕೆ ಆರಿಸಲಾಯಿತು ಎಂಬ ಸಕಾರಣ ವಿವರವನ್ನ ಪಕ್ಷದ ವೆಬ್ ಸೈಟ್​​ಗಳಲ್ಲಿ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯದಲ್ಲಿ ಗಂಭೀರ ಅಪರಾಧದ ಪ್ರಕರಣಗಳಿರುವ ಅಭ್ಯರ್ಥಿಗಳನ್ನ ನಿಷೇಧಿಸುವ ಕಾನೂನು ಮಾಡಲು ಯಾವ ರಾಜಕೀಯ ಪಕ್ಷಕ್ಕೂ ಆಸಕ್ತಿ ಇಲ್ಲ. ಸರ್ಕಾರದ ಶಾಸನ ವಿಭಾಗ ಕೂಡ ಆಸಕ್ತಿ ತೋರುತ್ತಿಲ್ಲ ಎಂದು ಕಳೆದ ತಿಂಗಳೂ ಕೂಡ ಸುಪ್ರೀಂ ಕೋರ್ಟ್ ವ್ಯಗ್ರಗೊಂಡಿತ್ತು.

ಈಗಿರುವ ಕಾನೂನು ಪ್ರಕಾರ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಜೈಲುವಾಸದ ಶಿಕ್ಷೆ ಹೊಂದಿರುವ ಸಂಸದ ಅಥವಾ ಶಾಸಕನಾಗಲೀ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಶಿಕ್ಷೆ ಜಾರಿಯಾಗಿ ಅವರು ಬಿಡುಗಡೆ ಆಗುವವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ, ರಾಜಕೀಯ ವ್ಯಕ್ತಿ ದೋಷಿ ಎಂದು ತೀರ್ಪು ಬರುವ ಮುನ್ನ ಅವರ ಮೇಲಿರುವ ಗುರುತರ ಆರೋಪದ ಮೇಲೆ ಅನರ್ಹಗೊಳಿಸುವ ಯಾವುದೇ ಕಾನೂನು ಸದ್ಯ ಇಲ್ಲ.

ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷದಲ್ಲಿ ಶೇ. 17ರಷ್ಟು ಹೆಚ್ಚಾಗಿದೆ. ಚುನಾವಣಾ ಆಯೋಗ ಕೂಡ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ವಿಚಾರದಲ್ಲಿ ಕಠಿಣ ನಿಲುವು ಹೊಂದಿದೆ. ಇಂಥ ಅಭ್ಯರ್ಥಿಯ ಅಪರಾಧಗಳ ಮಾಹಿತಿಯನ್ನು ರಾಜಕೀಯ ಪಕ್ಷಗಳು ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದೂ ಆಯೋಗವು ಈ ಹಿಂದೆ ನಿರ್ದೇಶನ ನೀಡಿತ್ತು. ಆದರೆ ಆ ಆದೇಶಕ್ಕೂ ರಾಜಕೀಯ ಪಕ್ಷಗಳು ಕವಡೆ ಕಾಸಿನ ಕಿಮ್ಮತ್ತು ನೀಡಿದಂತಿಲ್ಲ.

Exit mobile version