ವೈದ್ಯನೊಬ್ಬನ ಆತ್ಮಹತ್ಯೆಯ ಕಾರಣ ಮನಕಲುಕುವಂತಿದೆ !

ನವದೆಹಲಿ, ಮೇ. 03: ಭಾರತದಲ್ಲಿ ಕರೊನಾ ಎರಡನೇ ಅಲೆ ತೀವ್ರವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಒತ್ತಡವನ್ನು ತಾಳಲಾರದೆ, ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ವೈದ್ಯಕೀಯ ಮಂಡಳಿಯ ಮಾಜಿ ಮುಖ್ಯಸ್ಥ ಟ್ವಿಟ್ ಮಾಡಿದ್ದಾರೆ.

ಡಾ. ವಿವೇಕ್ ರೈ ಆತ್ಮಹತ್ಯೆಗೆ ಶರಣಾದ ವೈದ್ಯ. ಈ ಬಗ್ಗೆ ಟ್ವಿಟ್ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ)ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್, ವಿವೇಕ್ ಓರ್ವ ಪರಿಣಿತ ವೈದ್ಯನಾಗಿದ್ದ. ಅವರು ಉತ್ತರ ಪ್ರದೇಶ ಗೋರಖ್‌ಪುರ್‌ ಮೂಲದವರು. ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಮಂದಿಯ ಪ್ರಾಣ ಉಳಿಸಿದ್ದಾರೆಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರತಿದಿನ 7 ರಿಂದ 8 ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಹೆಚ್ಚು ಹೆಚ್ಚು ಜನ ಕರೊನಾಗೆ ಬಲಿಯಾಗುವುದುನ್ನು ನೋಡಿ ವಿವೇಕ್‌ ಖಿನ್ನತೆಗೆ ಜಾರಿದ್ದರು. ಪರಿಸ್ಥಿತಿಯ ಮೇಲೆ ತೀವ್ರ ಹತಾಶೆಗೊಂಡ ವಿವೇಕ್ ತೀವ್ರ ಒತ್ತಡಕ್ಕೆ ಒಳಗಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಣ್ಣ ಎದುರಲ್ಲೇ ಜನರ ಪ್ರಾಣ ಹೋಗುವುದನ್ನು ಸಹಿಸದೇ ತಾವೂ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ವಿವೇಕ್ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ್ದಾರೆಂದು ವಾಂಖೇಡ್ಕರ್ ಹೇಳಿದರು.

ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಾಗ ಇದು ಭಾರೀ ಭಾವನಾತ್ಮಕ ಒತ್ತಡವನ್ನು ತರುತ್ತದೆ, ಯುವ ವೈದ್ಯನ ಈ ಸಾವು ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯ ನಿರಾಶೆಯನ್ನು ಸೃಷ್ಟಿಸಿರುವ ಈ ಕೆಟ್ಟ ವ್ಯವಸ್ಥೆ ಮಾಡಿದ ಕೊಲೆ ಎಂದರೆ ತಪ್ಪಾಗಲಾರದು. ಕೆಟ್ಟ ರಾಜಕೀಯ ಮತ್ತು ಕೆಟ್ಟ ಆಡಳಿತ ದುಷ್ಪರಿಣಾಮ ಇದಾಗಿದೆ ಎಂದು ವಾಂಖೇಡ್ಕರ್ ಹೇಳಿದ್ದಾರೆ.

ವಿವೇಕ್ ಅವರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊರೋನಾ ಎರಡನೇ ಆಲೆ ಇಡೀ ದೇಶದ ಆರೋಗ್ಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೊಲ ಸಷ್ಟಿಸಿದೆ. ಆಕ್ಸಿಜನ್‌ಗಾಗಿ ಕುಟುಂಬಸ್ಥರು ಬೀದಿ ಬೀದಿಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವು ನೋವುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯರೊಬ್ಬರನ್ನು ಕಳೆದುಕೊಳ್ಳುತ್ತೇವೆಂದರೆ, ಅದು ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತೆ.

Exit mobile version