ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚಾಗ್ರಾಸವಾಗಿದೆ ಸುಮಲತಾ V/S ಹೆಚ್‌ಡಿಕೆ ಟಗ್‌ ಆಫ್‌ ವಾರ್‌

ಬೆಂಗಳೂರು, ಜು. 08: ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಅನೇಕ ದಿನಗಳಿಂದ ಟಗ್ ಆಫ್ ವಾರ್ ನಡೆಯುತ್ತಿದೆ. ಈ ಟಗ್‌ ಆಫ್‌ ವಾರ್‌, ಮಂಡ್ಯ ಲೋಕಸಭಾ ಚುನಾವಣೆಯ ಸಂದರ್ಭದಿಂದಲೇ ಭುಗಿಲೆದ್ದಿದ್ದು, ಈಗ ರಾಜಾರೋಷವಾಗಿ ಎದ್ದು ಕಾಣುತ್ತಿದೆ. ಆಗಿನ ಸಂದರ್ಭದಲ್ಲಿ ಸುಮಲತಾ ಹೆಚ್ಚು ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ಈಗ ಇರುವ ಪರಿಸ್ಥಿತಿಯೇ ಬೇರೆಯಾಗಿದೆ. ಎರಡೂ ಬಣಗಳ ಅಭಿಮಾನಿಗಳು ಕೂಡಾ ಶತ್ರುಗಳೆಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಾದ ವಿವಾದ ನಡೆಸುತ್ತಿದ್ದಾರೆ. ಇದರ ನಡುವೆ ಒಂದು ಹಳೆಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಟ್ರೋಲ್ ಆಗ್ತಿದೆ. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಜೊತೆಗೆ ಕೆಲವು ಆಪ್ತರು ಇದ್ದು ಎದುರಿನಲ್ಲಿ ನಿಂತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೈಕಟ್ಟಿಕೊಂಡು ನಿಂತಿದ್ದಾರೆ. ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ.

ಎಚ್ಡಿಕೆ ಮತ್ತು ಸುಮಲತಾ ನಡುವಿನ ವಾಕ್ಸಮರ ಕೆ ಆರ್ ಎಸ್ ಡ್ಯಾಂ, ಮನ್ಮುಲ್ ಪ್ರಕರಣವನ್ನೂ ಮೀರಿ ಮುಂದಿನ ಚುನಾವಣೆಯಲ್ಲಿ ಸುಮಲತಾರನ್ನು ತಾನು ಖಂಡಿತಾ ಸೋಲಿಸುವ ಶಪಥ ಮಾಡುವ ತನಕ ಮುಂದುವರೆದಿದೆ…ಇನ್ನೂ ಮುಂದುವರೆಯುತ್ತಲೇ ಇದೆ. ಈ ನಡುವೆ ಹೊಸಾ ಚಿತ್ರವೂ ಸೇರಿಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಎಚ್ ಡಿ ಕುಮಾರಸ್ವಾಮಿ ಮೊದಲು ಚಿತ್ರ ನಿರ್ಮಾಪಕರಾಗಿದ್ದವರು. ಬಹುಶಃ ಈ ಚಿತ್ರ ಯಾವುದೋ ಸಿನಿಮಾ ಶೂಟಿಂಗ್ ಅಥವಾ ಅಂಥಾ ವಿಚಾರಕ್ಕೆ ಸಂಬಂಧಿಸಿದ್ದೇ ಆಗಿರಬೇಕು ಎನ್ನಲಾಗುತ್ತಿದೆ.

ರೆಬೆಲ್ ಸ್ಟಾರ್ ಅಂಬಿ ಫ್ಯಾನ್ ಕ್ಲಬ್ ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಈ ಚಿತ್ರದಲ್ಲಿ ಅಂಬರೀಶ್ ಜೊತೆ ರಾಕ್​ಲೈನ್ ವೆಂಕಟೇಶ್, ನಟ ದೇವರಾಜ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡಾ ಇದ್ದಾರೆ. ಸದ್ಯ ಭಾರೀ ಚರ್ಚೆಯಲ್ಲಿರುವ ಈ ಚಿತ್ರದ ವಿಚಾರವಾಗಿ ಮಾಜಿ ಸಿಎಂ ಎಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ನಿಲ್ಲೇನೆ.. ಹಾಗಂತ ಅಂಬರೀಶ್ ಗೆ ನಾನೇನು ಗುಲಾಮನಾಗಿದ್ದೆನಾ ? ಈ ವಿಷಯಕ್ಕೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ನಾನು ಕಳೆದ ಎರಡು ದಿನದ ಹಿಂದೆ ಹೇಳಿದ್ದ ಹೇಳಿಕೆಗೆ ಸ್ಕೋಪ್ ಕೊಡುವ ಅವಶ್ಯಕತೆ ಇಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಅದರ ಬಗ್ಗೆ ಗಮನಹರಿಸಬೇಕು ಎಂದು ಬಿಡದಿಯಲ್ಲಿ ಕಿಡಿ ಕಾರಿದ್ದಾರೆ.

ಇನ್ನು ಭ್ರಷ್ಟಾಚಾರದ ವಿಷಯದಲ್ಲಿ ಕುಮಾರಸ್ವಾಮಿ ಅಂಬಾಸಿಡರ್ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಎಚ್ಡಿಕೆ “ಹೌದು, ನಾನು ಭ್ರಷ್ಟಾಚಾರದಲ್ಲಿ ಅಂಬಾಸಿಡರ್. ಅನೇಕ ವರ್ಷಗಳಿಂದ ನಾನು ನಮ್ಮ ಕುಟುಂಬ ಭ್ರಷ್ಟಾಚಾರದ ವಿಷಯದಲ್ಲಿ ಹೋರಾಟ ಮಾಡ್ತಿದ್ದೇವೆ. ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ದ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ ಎಂದಿದ್ದಾರೆ.ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ ಎಚ್ಡಿಕೆ ಸುಮಲತಾ ಬಗ್ಗೆ ಗೌರವ ತೋರಿ ಮಾತನಾಡಿದ್ದಾರೆ. ಆ ಹೆಣ್ಣು ಮಗಳ ಬಗ್ಗೆ ಇದೀಗ ಚರ್ಚೆ ಬೇಡ, ಮುಂದಿನ ಚುನಾವಣೆ ಸಂದರ್ಭದಲ್ಲಿ ನಾನು ಮಾತಾಡ್ತೇನೆ ಎಂದು ಹೇಳಿದ್ದಾರೆ.

Exit mobile version