ಅಲೋಪತಿ ವಿರುದ್ಧ ಹೇಳಿಕೆ ಕುರಿತು ಜುಲೈ 12ರಂದು ಬಾಬಾ ರಾಮ್​​ದೇವ್ ಮನವಿ ಆಲಿಸಲಿದೆ ಸುಪ್ರೀಂ

ನವದೆಹಲಿ, ಜು. 05: ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಗಳನ್ನು ಬಳಸುವುದರ ವಿರುದ್ಧ ಬಾಬಾ ರಾಮ್​​ದೇವ್ ಮಾಡಿದ ಆರೋಪದ ಮೇಲೆ ದಾಖಲಾದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಸಲ್ಲಿಸಿದ್ದ ರಾಮ್​​ದೇವ್ ಅವರ ಮನವಿಯನ್ನು ಜುಲೈ 12 ರಂದು ಆಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಬಾಬಾ ರಾಮ್​​ದೇವ್ ಅವರ ಹೇಳಿಕೆಯ ಮೂಲ ದಾಖಲೆ ಭಾನುವಾರ ತಡರಾತ್ರಿ ಲಭಿಸಿರುವುದಾಗಿ ಕೋರ್ಟ್ ಹೇಳಿದೆ.

ತನಿಖೆಗೆ ತಡೆ ನೀಡಲು ಮತ್ತು ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಬಾಬಾ ರಾಮ್ ದೇವ್ ಮನವಿ ಮಾಡಿದುದರ ಬೆನ್ನಲ್ಲೇ ಅಲೋಪತಿ ಔಷಧದ ಬಳಕೆಯ ಬಗ್ಗೆ ರಾಮ್ ದೇವ್ ಅವರ ಹ ಹೇಳಿಕೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

“ನಿನ್ನೆ ರಾತ್ರಿ 11 ಗಂಟೆಗೆ, ಹೇಳಿಕೆಗಳು ಮತ್ತು ವಿಡಿಯೊಗಳ ಪ್ರತಿಗಳನ್ನು ಹೊಂದಿರುವ ಬೃಹತ್ ಫೈಲ್‌ಗಳನ್ನು ನಾವು ಪಡೆದುಕೊಂಡಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಯನ್ನು ಬಳಸುವುದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ರಾಮ್ ದೇವ್ ವಿರುದ್ಧ ಬಿಹಾರ್ ಮತ್ತು ಛತ್ತೀಸ್ ಗಡದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಆರೋಪದ ಮೇಲೆ ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಗಿದೆ.

Exit mobile version