ಯುವತಿ ನನ್ನನ್ನು ಭೇಟಿಗೆ ಯತ್ನಿಸಿರಬಹುದು, ಆದರೆ ನಾವು ಭೇಟಿ ಮಾಡಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು, ಮಾ. 27: ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು ಆದರೆ ನಾವು ಭೇಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜಕಾರಣಿಗಳು ಹಾಗೂ ನೀವು ಮಾಧ್ಯಮದವರು ಸಾರ್ವಜನಿಕ ಜೀವನದಲ್ಲಿ ಇರುವವರು. ಯಾವುದೇ ಪಕ್ಷದ ರಾಜಕಾರಣಿ ಆದರೂ ನೊಂದವರಿಗೆ, ಕಷ್ಟ ಅಂತಾ ಬಂದವರಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಿರುತ್ತಾರೆ. ಹಾಗೇ ಆ ಹೆಣ್ಣು ಮಗಳು ನನ್ನ ಭೇಟಿಗೆ ಪ್ರಯತ್ನಿಸಿದ್ದೆ ಅಂತಾ ಹೇಳಿದ್ದಾಳೆ.

ಸಂಕಷ್ಟ ಹೇಳಿಕೊಂಡು ಬಂದವರಿಗೆ ನಾವು ಸಹಾಯ ಮಾಡುತ್ತೇವೆ. ದಿನ ಬೆಳಗಾದರೆ ನನ್ನ ಮನೆ ಬಳಿ ಬಂದು ನೋಡಿ. ಅನೇಕರು ಹಣಕಾಸು ಸಮಸ್ಯೆ, ಸರ್ಕಾರದಿಂದ ತೊಂದರೆ, ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅದೇ ರೀತಿ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು.

ಒಂದು ವೇಳೆ ನಮ್ಮಿಂದ ಯಾರಿಗಾದರೂ ತೊಂದರೆಯಾದರೆ ಆಡಳಿತ ಪಕ್ಷದವರ ಬಳಿ ಹೋಗುತ್ತಾರೆ. ಅದೇ ರೀತಿ ಆ ಯುವತಿ ಬಂದಿರ ಬಹುದು. ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಆಕೆ ಬಂದರೂ ನಾನು ಪರಿಶೀಲನೆ ಮಾಡುತ್ತೇನೆ. ನಮ್ಮ ಸರ್ಕಾರದ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ. ಯಾರು ಯಾರ ಜತೆ ಮಾತನಾಡುತ್ತಿದ್ದಾರೆ, ಎಲ್ಲಿ ಹೋಗುತ್ತಿದ್ದಾರೆ ಎಂದು ಗಮನಿಸಿದ್ದೆವು. ಆದರೆ ಇದು ಅವರ ವೈಯಕ್ತಿಕ ವಿಚಾರ. ಅದರ ಅವಶ್ಯಕತೆ ನಮಗಿಲ್ಲ.

ನರೇಶ್ ಮಾಧ್ಯಮದ ವ್ಯಕ್ತಿ. ನನಗೆ ಪರಿಚಯಸ್ಥ. ನನಗೆ ಬೇಕಾದ ಹುಡುಗ. ಅವರ ಮನೆಗೂ ಹೋಗಿದ್ದೇನೆ. ಅನೇಕ ಬಾರಿ ಭೇಟಿ ಮಾಡಿದ್ದು, ಅನೇಕ ವಿಚಾರಗಳನ್ನು ಆತ ಹಂಚಿಕೊಂಡಿದ್ದ. ರಮೇಶ್ ಜಾರಕಿಹೊಳಿ ಅವರು ನನ್ನನ್ನು ಸ್ಮರಿಸಿಕೊಂಡರೆ, ನಾನ್ಯಾಕೆ ಬೇಡ ಎನ್ನಲಿ. ನನ್ನ ಬಗ್ಗೆ ಅವರಿಗೆ ಅನುಕಂಪ ಇರುವುದಕ್ಕೆ ಬಹಳ ಸಂತೋಷ.

ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರಿಗೆ ಅವರದೇ ಆದ ಘನತೆ ಇದೆ. ಅವರು ಸೂಕ್ತ ರಕ್ಷಣೆ ನೀಡುತ್ತಾರೆ. ಯುವತಿ ಪೋಷಕರು ಯಾರ ಬಳಿ ಇದ್ದಾರೆ ಅಂತಾ ನನಗೆ ಗೊತ್ತಿಲ್ಲ. ಅದು ಆ ಯುವತಿಗೇ ಗೊತ್ತು. ನಾನು ಅದನ್ನು ಯಾಕೆ ಟ್ರ್ಯಾಕ್ ಮಾಡಲಿ ಎಂದರು.

Exit mobile version