ಇನ್ನೂ 23 ಸಿಡಿಗಳಿವೆ, ಎಲ್ಲವೂ ಒಂದೊಂದೆ ಬಿಡುಗಡೆ ಆಗಲಿದೆ: ಯತ್ನಾಳ್ ಹೊಸ ಬಾಂಬ್

ಬೆಂಗಳೂರು, ಮಾ. 10: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ‘ಸಿಡಿ’ ಪ್ರಕರಣ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಮಾಜಿ ಸಚಿವರ ರಾಸಲೀಲೆ ಪ್ರಕರಣದ ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ಸಿಡಿ ವಿಷಯವಾಗಿ ಪ್ರತಿದಿನವೂ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಲೇ ಇದೆ. ಇದರ ನಡುವೆಯೇ ಸಿಡಿ ವಿಷಯದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 23 ಸಿಡಿ ಇದ್ದು, ಒಂದೊಂದೇ ಬಿಡುಗಡೆಯಾಗುತ್ತದೆ ಎಂದಿದ್ದಾರೆ. ನಾನು ಬೇರೆಯೇ ಸಿಡಿ ಇದೆ ಎಂದು ಹೇಳಿದ್ದೆ. ಆದರೆ ಬೇರೆಯದ್ದೇ ಸಿಡಿ ಬಿಡುಗಡೆಯಾಗಿದೆ. ಇನ್ನೂ 23 ಸಿಡಿ ಇವೆಯಂತೆ, ಒಂದೊಂದೇ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.

ಇಂತಹ ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುವ ಎರಡು ಪಕ್ಷಗಳಿವೆ. ಕೆಲ ರಾಜಕಾರಣಿಗಳು ಕೂಡಾ ಇದ್ದಾರೆ. ಎಲ್ಲಾ ಸಿಡಿಗಳು ಬಿಡುಗಡೆಯಾಗುತ್ತದೆ. ನಾನು ಈ ಹಿಂದೆ ಸಿಡಿ ಬಿಡುಗಡೆ ಆಗಲಿದೆ, ಸತ್ಯದರ್ಶನವಾಗಲಿದೆ ಎಂದಿದ್ದೆ. ಈಗ ಹಾಗೆಯೇ ಎಲ್ಲವೂ ಆಗುತ್ತಿದೆ. ಆದರೆ ನನ್ನ ಬಳಿ ಯಾವ ಸಿಡಿಯೂ ಇಲ್ಲ ಎಂದು ಕೂಡಾ ಹೇಳಿದರು.

ಈಗ ರಮೇಶ್‌ ಜಾರಕಿಹೊಳಿ ಅವರ ಸಿಡಿಯನ್ನು ಇವರು ಬಿಟ್ಟಿದ್ದಾರೆ. ಇನ್ನು ರಮೇಶ್‌ ಜಾರಕಿಹೊಳಿಯವರು ಸುಮ್ಮನಿರುತ್ತಾರಾ? ಅವರ ಬಳಿಯೂ ಸುಮಾರು ಸಿಡಿಗಳಿವೆ. ಅಪ್ಪ, ಮಕ್ಕಳ ಸಿಡಿಯೂ ಇದೆ. ಅವರು ಆ ಸಿಡಿಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತಾರೆ ಎಂದೂ ಹೇಳಿದರು.

Exit mobile version