ದೇಶಾದ್ಯಂತ ಮತ್ತೆ ಲಾಕ್​ಡೌನ್ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಏ. 19: ದೇಶದಲ್ಲಿ ಕೊವಿಡ್​-19 ಸೋಂಕಿನ ಪ್ರಮಾಣ ಮಿತಿಮೀರುತ್ತಿದ್ದರೂ, ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್​ಡೌನ್ ಮಾಡುವುದಿಲ್ಲ. ಅದರ ಬದಲು ಸೋಂಕು ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಕಂಟೈನ್​ಮೆಂಟ್ ವಲಯಗಳನ್ನಾಗಿ ಗುರುತಿಸಲಾಗುವುದು. ಅಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕೊರೊನಾ ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್​ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (FISME) ಅಧ್ಯಕ್ಷ ಅನಿಮೇಶ್​ ಸಕ್ಸೇನಾರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಾದ್ಯಂತ ಮತ್ತೆ ಲಾಕ್​ಡೌನ್ ಜಾರಿ ಮಾಡುವ ಯೋಜನೆ ಇಲ್ಲ ಎಂದು ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದ್ದಾರೆ. ಇನ್ನು ತಮ್ಮೊಂದಿಗೆ ಹಣಕಾಸು ಸಚಿವರು ಮಾತನಾಡಿದ್ದರ ಬಗ್ಗೆ ಅನಿಮೇಶ್​ ಸಕ್ಸೇನಾ ಮಾಹಿತಿ ನೀಡಿದ್ದು, ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಕೊರೊನಾ ವೈರಸ್​ನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ರಾಜ್ಯಗಳಲ್ಲಿ ಇರುವ ವೈದ್ಯಕೀಯ ವ್ಯವಸ್ಥೆ, ಆಕ್ಸಿಜನ್​ ಸೇರಿ ಇತರ ಸೌಕರ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾಗಿ ಅನಿಮೇಶ್ ಸಕ್ಸೇನಾ ಹೇಳಿದ್ದಾರೆ. ಅಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ.

Exit mobile version