ಕೊರೋನಾಗೆ ಕಡಿವಾಣ ಹಾಕಲು ಲಾಕ್ ಡೌನ್ ಬಗ್ಗೆ ಆಲೋಚಿಸಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ನವದೆಹಲಿ, ಮೇ. 03: ‘ದೇಶದಲ್ಲಿ ಕೊರೊನಾ 2ನೇ ಅಲೆಯ ಸೋಂಕು ವೇಗವಾಗಿ ಹರಡುತ್ತಿದೆ. ಹೆಚ್ಚು ಜನರು ಸೇರುವ, ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಲಾಕ್​ಡೌನ್ ಹೇರುವ ಬಗ್ಗೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಲೋಚಿಸಬೇಕು’ ಎಂದು ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಭಾನುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ‘ಲಾಕ್​ಡೌನ್​ನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ. ಆದರಲ್ಲಿಯೂ ಬಡವರ ಮೇಲೆ ಲಾಕ್​ಡೌನ್​ನ ಪರಿಣಾಮಗಳು ತೀವ್ರತರವಾಗಿರುತ್ತವೆ ಎಂಬುದು ನಮಗೆ ತಿಳಿದಿದೆ. ಲಾಕ್​ಡೌನ್ ಹೇರಿದರೆ ಈ ಸಮುದಾಯದ ಹಿತ ಕಾಪಾಡಲು ಅಗತ್ಯ ಕ್ರಮಗಳನ್ನೂ ಸರ್ಕಾರಗಳು ತೆಗೆದುಕೊಳ್ಳಬೇಕು’. ‘ಸ್ಥಳೀಯ ಗುರುತಿನ ಪುರಾವೆಗಳು ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು. ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಕುರಿತು ಕೇಂದ್ರ ಸರ್ಕಾರವು ಇನ್ನು 2 ವಾರಗಳ ಒಳಗೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಬೇಕು. ಇದನ್ನು ಎಲ್ಲ ರಾಜ್ಯ ಸರ್ಕಾರಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸುಪ್ರೀಂಕೋರ್ಟ್​ ಸೂಚಿಸಿದೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ದಾಸ್ತಾನು ಇರಿಸಿಕೊಳ್ಳಬೇಕು. ಮುಂದಿನ ನಾಲ್ಕು ದಿನಗಳ ಒಳಗೆ ತುರ್ತು ದಾಸ್ತಾನು ಸಿದ್ಧವಾಗಬೇಕು. ಇದನ್ನು ಪ್ರತಿದಿನವೂ ಪರಿಶೀಲಿಸಬೇಕು. ಯಾವುದೇ ರಾಜ್ಯಕ್ಕೆ ಆಕ್ಸಿಜನ್ ಸರಬರಾಜಿನಲ್ಲಿ ತೊಂದರೆಯಾಗಬಾರದು’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್​ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ಈ ವೇಳೆ ಆಕ್ಸಿಜನ್, ಜೀವರಕ್ಷಕ ಔಷಧಿಗಳು ಮತ್ತು ಲಸಿಕೆಗಳ ಪೂರೈಕೆ ಬಗ್ಗೆ ಸುಪ್ರೀಂಕೋರ್ಟ್​ ಪರಾಮರ್ಶೆ ನಡೆಸಿತು.

Exit mobile version